ಬೆಳಗಾವಿಯ ಐತಿಹಾಸಿಕ ಮುಚ್ಚಂಡಿ ಶ್ರೀ ಸಿದ್ದೇಶ್ವರ ಮಂದಿರದ ಆವರಣದಲ್ಲಿ ಪರಿಸರ ಸಂರಕ್ಷಣೆ ಮತ್ತು ಧರ್ಮ ಜಾಗೃತಿಯ ಸದುದ್ದೇಶದಿಂದ ರುದ್ರಾಕ್ಷಿ ಹಾಗೂ ಬಿಲ್ವಪತ್ರೆ ಸಸಿಗಳನ್ನು ನೆಡುವ ಮಹತ್ವದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.


ಬೆಳಗಾವಿಯ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಂದಿರದ ಆವರಣದಲ್ಲಿ ಸರ್ವಲೋಕಾ ಸೇವಾ ಫೌಂಡೇಶನ್ ಹಾಗೂ ಶ್ರೀ ಸಿದ್ಧೇಶ್ವರ ಮಂದಿರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ರುದ್ರಾಕ್ಷಿ ಮತ್ತು ಬಿಲ್ವಪತ್ರೆ ಸಸಿ ನೆಡುವ ವೃಕ್ಷೋತ್ಸವ ಕಾರ್ಯಕ್ರಮ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು.
ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವೀರೇಶ ಹಿರೆಮಠ ಮತ್ತು ಮಂದಿರದ ಅಧ್ಯಕ್ಷರಾದ ಮಲ್ಲಪ್ಪ ಸುಗಣಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಪುರಾಣದ ಪ್ರಕಾರ ರುದ್ರಾಕ್ಷಿ ವೃಕ್ಷದ ಮಹತ್ವ ಮತ್ತು ಅದರ ಮಹಿಮೆಯನ್ನು ಸವಿವರವಾಗಿ ತಿಳಿಸಿಕೊಡಲಾಯಿತು. ರುದ್ರಾಕ್ಷಿ ಧರಿಸುವುದರಿಂದ ಹಾಗೂ ಅದರ ದರ್ಶನ-ಸ್ಪರ್ಶನದಿಂದ ಸಕಲ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಕ್ತಾರರು ವಿಶೇಷವಾಗಿ ವಿವರಿಸಿದರು. ಈ ಧಾರ್ಮಿಕ ಹಾಗೂ ಪರಿಸರ ಪರ ಸತ್ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು, ಮಂದಿರದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಹಿತೈಷಿಗಳು ಉತ್ಸಾಹದಿಂದ ಭಾಗವಹಿಸಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಪರಿಸರ ಸಮತೋಲನ ಕಾಪಾಡುವ ಜತೆಗೆ ಧಾರ್ಮಿಕ ನಂಬಿಕೆಗಳನ್ನು ಬಿತ್ತುವ ಇಂತಹ ಸಕಾರಾತ್ಮಕ ಪ್ರಯತ್ನಗಳಿಗೆ ಬೆಳಗಾವಿ ಜನತೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ಪುಂಡಲೀಕ ಕುಂಡೇಕರ್, ಗೌರೀಶ್ ಹಿರೇಮಠ್, ಬಾಪು ಅತ್ತಾರ, ದತ್ತಾತ್ರೇಯ ಕುಂಡೇಕರ್, ರೋಹನ್ ಕುಂಡೇಕರ್ ಇನ್ನುಳಿದವರು ಭಾಗಿಯಾಗಿದ್ಧರು.
