Belagavi

ಬೆಳಗಾವಿಯಲ್ಲಿ AOMSI 13ನೇ ವಾರ್ಷಿಕ ಸಮ್ಮೇಳನ. ಬಾಯಿ ಕ್ಯಾನ್ಸರ್ ಹೋಗಲಾಡಿಸಲು ಯೋಗ್ಯ ಚಿಕಿತ್ಸೆ ದೊರೆಯುವಂತಾಗಲಿ; ಡಾ. ಪ್ರಭಾಕರ ಕೋರೆ

Share

ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಹಾಗೂ ಗುಟ್ಕಾ ಜಗಿಯುವ ಅಭ್ಯಾಸದಿಂದ ಬಾಯಿಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಯಲು ಆಯೋಜಿಸಿರುವ AOMSI ಕರ್ನಾಟಕ ಸ್ಟೇಟ್ ಚಾಪ್ಟರ್‌ನ 13ನೇ ವಾರ್ಷಿಕ ಸಮ್ಮೇಳನ ಯಶಸ್ವಿಯಾಗಲಿ. ಅಲ್ಲದೇ, ತಜ್ಞ ವೈದ್ಯರು ಬಾಯಿ ಕ್ಯಾನ್ಸರ್ ಹೋಗಲಾಡಿಸಲು ಪೂರಕ ಚಿಕಿತ್ಸೆಗಳನ್ನು ನೀಡಲಿ ಎಂದು ಕಾಹೇರನ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿಯ ಕೆಇಎಲ್ ಸೆಂಟೆನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಕೆಎಲ್ಇ ವಿಕೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಓರಲ್ ಅಂಡ್ ಮ್ಯಾಕ್ಸಿಲೋಫೇಶಿಯಲ್ ಸರ್ಜರಿ ವಿಭಾಗದ ವತಿಯಿಂದ ಜರುಗಿದ AOMSI ಕರ್ನಾಟಕ ಸ್ಟೇಟ್ ಚಾಪ್ಟರ್‌ನ 13ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕೆಇಎಲ್ ಸಂಸ್ಥೆಯ ಚೇರ್ಮನ್ ಎಮೆರಿಟಸ್ ಹಾಗೂ ಕಾಹೇರನ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಕೆಇಎಲ್ ಸಂಸ್ಥೆಯ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಇಂದಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ದಂತ ಹಾಗೂ ಬಾಯಿಯ ಆರೋಗ್ಯ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಹಾಗೂ ಗುಟ್ಕಾ ಜಗಿಯುವ ಅಭ್ಯಾಸದಿಂದ ಬಾಯಿಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ ಅವರು, 25 ವರ್ಷಗಳ ಹಿಂದೆ ಈ ಭಾಗದಲ್ಲಿ ಬಾಯಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ನುರಿತ ವೈದ್ಯರು ಸಿಗುತ್ತಿರಲಿಲ್ಲ ಆದರೆ ಇಂದು ನೂರಾರು ತಜ್ಞ ವೈದ್ಯರು ಲಭ್ಯವಿದ್ದಾರೆ ಎಂದರು. ಅಲ್ಲದೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೈದ್ಯರು ಸರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಯೇ ಎಂದು ಪರೀಕ್ಷಿಸುವ ಸವಾಲು ಮುಂದಿಟ್ಟಿದ್ದು, ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಬಾಯಿಯ ಕ್ಯಾನ್ಸರ್’ನ್ನು ಹೋಗಲಾಡಿಸಲು ಯೋಗ್ಯ ಚಿಕಿತ್ಸೆ ಸಿಗುವಂತಾಗಲಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಎಎಚ್‌ಇಆರ್ ಕುಲಪತಿ ಡಾ. ಸಂದೀಪ್ ಶ್ರೀವಾಸ್ತವ, ರಿಜಿಸ್ಟ್ರಾರ್ ಡಾ. ವಿಶ್ವನಾಥ ಎಂ. ಪಟ್ಟಣಶೆಟ್ಟಿ, ಎಒಎಂಎಸ್‌ಐ ಗೌರವ ಅಧ್ಯಕ್ಷ ಡಾ. ಆಶೀಶ್ ಗುಪ್ತಾ, ಗೌರವ ಕೋಶಾಧಿಕಾರಿ ಡಾ. ಜಿಮ್ಸನ್ ಎಸ್., ಕೆಎಒಎಂಎಸ್‌ಐ ಅಧ್ಯಕ್ಷ ಡಾ. ವೆಂಕಟೇಶ್ ಅಣೇಹೊಸೂರು, ಕಾರ್ಯದರ್ಶಿ ಡಾ. ಗಿರೀಶ್ ಗೌಡ, ಸಮ್ಮೇಳನದ ಚೇರ್ಮನ್ ಪ್ರೊ. ಡಾ. ಪದ್ಮರಾಜ್ ಹೆಗಡೆ, ಸಂಘಟನಾ ಚೇರ್ಮನ್ ಡಾ. ಶ್ರೀಧರ್ ಬಾಲಿಗಾ, ಸಂಘಟನಾ ಕಾರ್ಯದರ್ಶಿ ಡಾ. ಸಂಜಯ್ ರಾವ್ ಹಾಗೂ ಪ್ರಾಚಾರ್ಯೆ ಡಾ. ಕಾಂತೇಶ್ವರಿ ಐ.ಕೆ. ಉಪಸ್ಥಿತರಿದ್ದರು.

Tags:

error: Content is protected !!