ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ, ಘೋಟಗಾಳಿಯ ಯುವ ಮುಖಂಡರೊಬ್ಬರು ಯಾವುದೇ ಸರ್ಕಾರದ ನೆರವಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಒಂದು ಕಿಲೋಮೀಟರ್ ರಸ್ತೆಯನ್ನು ಸುವ್ಯವಸ್ಥಿತಗೊಳಿಸಿ ಜನರಿಗೆ ದಾರಿದೀಪವಾಗಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ ಸುಧಾರಣೆ ಮಾಡುವ ಮೂಲಕ ಇವರು ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.


ಘೋಟಗಾಳಿ ಗ್ರಾಮದ ಯುವ ಮುಖಂಡ ರಫೀಕ್ ಹಲಶೀಕರ ಅವರು ಗಣೇಶ ಹಬ್ಬದ ನಿಮಿತ್ತ ಘೋಟಗಾಳಿ-ದೇವರಾಯಿ-ಜಾಬೇಗಾಳಿ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿದ್ದ ತೆಗ್ಗು-ಗುಂಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಬೌಂಡರ್ಗಳನ್ನು ಹಾಕಿ ಸುಮಾರು ಐವತ್ತು ಸಾವಿರ ರೂಪಾಯಿಗಳ ತಮ್ಮ ಸ್ವಂತ ಖರ್ಚಿನಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಯಾವುದೇ ಸ್ವಾರ್ಥವಿಲ್ಲದೆ, ಗ್ರಾಮ ಪಂಚಾಯಿತಿ ಅಥವಾ ಇಲಾಖೆಯ ಅನುದಾನವನ್ನು ಬಯಸದೆ ಕೈಗೊಂಡ ಈ ಮಾನವೀಯ ಹಾಗೂ ಜನಪರ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನಜೀರ್ ಸಾಬ್ ಹಲಶೀಕರ, ನಾರಾಯಣ ವೀರ, ಅಮರ್ ಕುಂಬಾರ, ಭಗವಂತ ದೇಸಾಯಿ ಹಾಗೂ ಶಂಕರ ದೇಸಾಯಿ ಸಾಥ್ ನೀಡಿದ್ದಾರೆ.
