ಕಿತ್ತೂರು ಕ್ಷೇತ್ರದ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಅಭಿವೃದ್ಧಿಗೆ ಶಾಸಕ ಬಾಬಾಸಾಹೇಬ್ ಪಾಟೀಲ್ 4.25 ಕೋಟಿ ರೂಪಾಯಿ ಅನುದಾನ ತಂದು ಹೊಸ ಇತಿಹಾಸ ಬರೆದಿದ್ದಾರೆ. ಪಟ್ಟಣದ ಮೂಲಸೌಕರ್ಯ ವೃದ್ಧಿಗೆ ಚಾಲನೆ ಸಿಕ್ಕಿದ್ದು, ಶಾಸಕರ ಈ ಜನಪರ ಕಾಳಜಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಿತ್ತೂರು ಕ್ಷೇತ್ರದ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು 4.25 ಕೋಟಿ ರೂಪಾಯಿಗಳ ಭರ್ಜರಿ ಅನುದಾನ ತರುವ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಪಟ್ಟಣದ ಪ್ರತಿಯೊಂದು ವಾರ್ಡ್ಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ ಶಾಸಕರು ವಾರ್ಡ್ಗಳಿಗೆ ನೇರವಾಗಿ ತೆರಳಿ ಸಮಸ್ಯೆಗಳನ್ನು ಆಲಿಸಿ, ಒಳಚರಂಡಿ ವ್ಯವಸ್ಥೆ ಹಾಗೂ ಸಿಸಿ ರಸ್ತೆ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ. ಕಿತ್ತೂರು ಕ್ಷೇತ್ರದ ಇತಿಹಾಸದಲ್ಲೇ ಪಟ್ಟಣ ಪಂಚಾಯತಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಅನುದಾನ ಬಂದಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದ್ದು, ಗುಣಮಟ್ಟದ ಕಾಮಗಾರಿಗಾಗಿ ಸೂಕ್ತ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಶಾಸಕ ಬಾಬಾಸಾಹೇಬ್ ಪಾಟೀಲ್, ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಗೆ ಇನ್ನೂ ಹೆಚ್ಚಿನ ಅನುದಾನ ತರಲಾಗುವುದು ಎಂದಿದ್ದಾರೆ. ಅಧಿಕಾರಿಗಳು ಮತ್ತು ಸರ್ವ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿ ಸರ್ಕಾರದ ಅನುದಾನವನ್ನು ಜನರ ಹಿತಕ್ಕಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ಶಾಸಕರ ಈ ನಿರಂತರ ಪ್ರಯತ್ನದಿಂದ ಎಂ.ಕೆ. ಹುಬ್ಬಳ್ಳಿ ಮಾದರಿ ಪಟ್ಟಣವಾಗಿ ರೂಪುಗೊಳ್ಳುವುದರ ಜೊತೆಗೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂಬ ಭರವಸೆ ಜನಸಾಮಾನ್ಯರಲ್ಲಿ ಮೂಡಿದೆ. ವರದಿಗಾರ ಶಾನೂಲ ಮತ್ತೆಖಾನ ಈ ಸುದ್ದಿಯನ್ನು ವರದಿ ಮಾಡಿದ್ದಾರೆ.

