Vijaypura

ವಿಜಯಪುರದಲ್ಲಿ 2.97 ಲಕ್ಷ ಎಎಸ್‌ಡಿಡಿಒ ಮತದಾರರು ಪತ್ತೆ

Share

ವಿಜಯಪುರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಮನೆ-ಮನೆ ಸಮೀಕ್ಷೆ ಹಾಗೂ ಪರಿಶೀಲನೆ ವೇಳೆ ಒಟ್ಟು 2,97,146 ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸಾಯಂಕಾಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 59,092 ಮಂದಿ ಗೈರುಹಾಜರಿ, 1,52,169 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 54,768 ಮಂದಿ ಮೃತಪಟ್ಟವರು, 30,592 ಡುಪ್ಲಿಕೇಟ್ ಮತದಾರರು ಹಾಗೂ 525 ಇತರೆ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಕ್ಷೇತ್ರವಾರು ಪೈಕಿ ಬಿಜಾಪುರ ನಗರದಲ್ಲಿ ಅತಿ ಹೆಚ್ಚು 79,737 ಎಎಸ್‌ಡಿಡಿಒ ಮತದಾರರು ಪತ್ತೆಯಾಗಿದ್ದಾರೆ. ನಾಗಠಾಣದಲ್ಲಿ 40,526, ಮುದ್ದೇಬಿಹಾಳದಲ್ಲಿ 35,990, ಸಿಂದಗಿಯಲ್ಲಿ 32,090, ದೇವರಹಿಪ್ಪರಗಿಯಲ್ಲಿ 30,551, ಇಂಡಿಯಲ್ಲಿ 28,906, ಬಸವನಬಾಗೇವಾಡಿಯಲ್ಲಿ 25,054 ಹಾಗೂ ಬಬಲೇಶ್ವರದಲ್ಲಿ 24,292 ಮತದಾರರನ್ನು ಗುರುತಿಸಲಾಗಿದೆ.
ಪರಿಷ್ಕರಣೆಯ ಬಳಿಕ ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 16,84,968 ಮತದಾರರಿದ್ದು, 8,57,619 ಪುರುಷರು, 8,27,170 ಮಹಿಳೆಯರು ಹಾಗೂ 179 ಇತರೆ ಮತದಾರರಿದ್ದಾರೆ.
ಇದೇ ವೇಳೆ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಹಿಂದೆ 2,092 ಮತಗಟ್ಟೆಗಳಿದ್ದು, 67 ಹೊಸ ಮತಗಟ್ಟೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಒಟ್ಟು 2,159 ಮತಗಟ್ಟೆಗಳಾಗಿವೆ. ನಾಲ್ಕು ಮತಗಟ್ಟೆಗಳ ಕಟ್ಟಡ ಸ್ಥಳ ಬದಲಾವಣೆ ಹಾಗೂ ಮೂರು ಮತಗಟ್ಟೆಗಳ ಹೆಸರು ಬದಲಾವಣೆ ಮಾಡಲಾಗಿದೆ.
ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ನಮೂನೆ-6ರ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 2026ರ ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಯುವ ಮತದಾರರೂ ನೋಂದಣಿಗೆ ಅರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Tags:

error: Content is protected !!