ಬೆಳಗಾವಿ ನಗರದ ವೆಂಗುರ್ಲಾ ರಸ್ತೆಯ ಗಾಂಧಿ ಸರ್ಕಲ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ, ನಗದು ಹಣ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ದಿನಾಂಕ 04/08/2026 ರಂದು ಬೆಳಗಾವಿಯ ವೆಂಗುರ್ಲಾ ರಸ್ತೆಯ ಗಾಂಧಿ ಸರ್ಕಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಗಣೇಶಪುರದ ಲಕ್ಷ್ಮಿ ನಗರ ನಿವಾಸಿ ಕೌಶಿಕ್ ಕೃಷ್ಣ ಮೊದಲಿಯಾರ್ (22) ಹಾಗೂ ಜ್ಯೋತಿ ನಗರ ನಿವಾಸಿ ಚಂದ್ರಕಾಂತ ಅನಿಲ ತಾಪಾ (19) ಎಂಬ ಇಬ್ಬರು ಆರೋಪಿಗಳನ್ನು ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಆರ್. ಐ. ಸನದಿ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಗ್ಯಾಂಗ್‌ವಾಡಿ ನಿವಾಸಿ ಮಂಜುನಾಥ ಎಂಬಾತನಿಂದ ಗಾಂಜಾ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಬಂಧಿತರಿಂದ 13,000 ರೂಪಾಯಿ ಮೌಲ್ಯದ 2 ಕೆಜಿ 60 ಗ್ರಾಂ ಗಾಂಜಾ, 1,730 ರೂಪಾಯಿ ನಗದು ಹಣ ಹಾಗೂ 10,000 ರೂಪಾಯಿ ಮೌಲ್ಯದ 2 ವಿವೋ ಕಂಪನಿಯ ಮೊಬೈಲ್‌ಗಳು ಸೇರಿದಂತೆ ಒಟ್ಟು 24,730 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಯಶಸ್ವಿ ದಾಳಿ ನಡೆಸಿದ ಸಿಸಿಬಿ ವಿಭಾಗದ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ಶ್ಲಾಘಿಸಿದ್ದಾರೆ.
