ಬೆಳಗಾವಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಶಕಗಳ ಕಾಲ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಅಸೋಸಿಯೇಟ್ ಎಡಿಟರ್ ನೌಶಾದ್ ಬಿಜಾಪುರೆ ಅವರನ್ನು ‘ಲೋಕದರ್ಶನ’ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ‘ಲೋಕದರ್ಶನ’ ದಿನಪತ್ರಿಕೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಎಂ.ಬಿ. ದೇಸಾಯಿ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಪ್ರತಿಷ್ಠಿತ ‘ಲೋಕದರ್ಶನ’ ಪ್ರಶಸ್ತಿಯನ್ನು ನೌಶಾದ್ ಬಿಜಾಪುರೆ ಅವರಿಗೆ ಪ್ರದಾನ ಮಾಡಲಾಯಿತು.
ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಹಾಗೂ ಜಯಲಕ್ಷ್ಮಿ ಶರದಚಂದ್ರ ದೇಸಾಯಿ ಅವರು ನೌಶಾದ್ ಬಿಜಾಪುರೆ ಅವರನ್ನು ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಿದರು.
ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನೌಶಾದ್ ಬಿಜಾಪುರೆ ಅವರ ಸೇವೆಯನ್ನು ಗಣ್ಯರು ಇದೇ ವೇಳೆ ಶ್ಲಾಘಿಸಿದರು. ವಸ್ತುನಿಷ್ಠ ಹಾಗೂ ನಿರ್ಭೀತ ಪತ್ರಿಕೋದ್ಯಮದ ಮೂಲಕ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿರುವ ಅವರ ಕೊಡುಗೆ ಪ್ರಶಸ್ತಿಗೆ ಮತ್ತಷ್ಟು ಗೌರವ ತಂದಿದೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ್ ಮಠದ, ಮಂಜುನಾಥ ಪ್ಯಾಟಿ, ಅಪ್ಪಣ್ಣ ಮೇತ್ರಿ, ಸಾಗರ್ ಚೌಗಲೆ, ಧನಂಜಯ ಸೇರಿದಂತೆ ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
