ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವು ಜಿಲ್ಲೆಯಲ್ಲಿ ಪಾರದರ್ಶಕತೆಯಿಂದ ಜರುಗುತ್ತಿದೆ. ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರದ ಚಟುವಟಿಕೆಗಳ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಶುಕ್ರವಾರ (ಆ.21) ಜರುಗಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರದ ಚಟುವಟಿಕೆಗಳ ಕುರಿತು ಜರುಗಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 18 ವಿಧಾನಸಭಾ ಕ್ಷೇತ್ರದಲ್ಲಿ 41,07,000 ಮತದಾರರಿಗೆ ಎನ್ಯೂಮರೇಷನ್ ಅರ್ಜಿಗಳನ್ನು 4,525 ಬಿ.ಎಲ್.ಓ. ಗಳ ಮೂಲಕ ವಿತರಿಸಲಾಗಿದ್ದು, ಈ ಪೈಕಿ 35,93,561 ಅರ್ಜಿಗಳನ್ನು ಗಣಕೀಕರಣ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದ 36,476 ಮತದಾರರು, 1,34,903 ಮೃತ ಮತದಾರರು, 26,459 ಗೈರು ಮತದಾರರು, 2,83,249 ಶಾಶ್ವತ ಸ್ಥಳಾಂತರ ಮತದಾರರನ್ನು ಗುರುತಿಸಲಾಗಿದೆ ಎಂದರು.
ಗೈರು, ಮೃತ ಹಾಗೂ ಸ್ಥಳಾಂತರಗೊಂಡಂತಹ ಮತದಾರರ ವಿವರಗಳನ್ನು ಈಗಾಗಲೇ ಸಂಬಂಧಿಸಿದ ಕಚೇರಿಗಳಿಗೆ ಸಲ್ಲಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗದಿದ್ದಲ್ಲಿ ಫಾರ್ಮ್ ನಂ.6ರ ಮೂಲಕ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಅವಕಾಶವಿದೆ. ಈ ಕಾರ್ಯಕ್ಕೆ ಬ್ಲಾಕ್ ಮಟ್ಟದ ಅಧಿಕಾರಿಗಳ ಜೊತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ತಿಳಿಸಿದರು.
ಆಗಸ್ಟ್ 24 ರಿಂದ ಲಿಂಕ್ ಅಥವಾ ಸಂಬಂಧಿಕರಿಲ್ಲದ ಮ್ಯಾಪಿಂಗ್ ಇರದ ಮತದಾರರಿಗೆ ನೋಟಿಸ್ ಜನರೇಟ್ ಮಾಡಿ, ನೋಟಿಸ್ ಗಳನ್ನು ಬಿ.ಎಲ್.ಓ.ಗಳು ಖುದ್ದಾಗಿ ಮತದಾರರ ಮನೆಗೆ ತಲುಪಿಸಿ ಮತದಾರರ ಸಹಿ ಹಾಗೂ ದಾಖಲೆಗಳನ್ನು ಸ್ವೀಕರಿಸುವ ಛಾಯಾ ಚಿತ್ರವನ್ನು ಮೊಬೈಲ್ ಆಪ್‌ನಲ್ಲಿ ಕಡ್ಡಾಯವಾಗಿ ದಾಖಲಿಸಲು ತಿಳಿಸಿದರು.
ಭಾರತದಲ್ಲಿ 01-07-1987 ಕ್ಕಿಂತ ಮೊದಲು ಜನಿಸಿದವರು ಸ್ವಂತ ದಾಖಲೆ ನೀಡಬೇಕಿದ್ದು, 01-07-1987 ರಿಂದ 02-12-2004 ರ ನಡುವೆ ಜನಿಸಿದವರು ಸ್ವಂತ ದಾಖಲೆಯೊಂದಿಗೆ ತಂದೆ ಅಥವಾ ತಾಯಿಯ ಹುಟ್ಟಿದ ದಿನಾಂಕ ಹಾಗೂ ಸ್ಥಳದ ದಾಖಲೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಲಿಂಕ್ ಅಥವಾ ಸಂಬಂಧಿಕರಿಲ್ಲದ ಮ್ಯಾಪಿಂಗ್ ಇರದ ಮತದಾರರಿಗೆ ನೀಡಲಾದ ನೋಟಸಗಳ ವಿಚಾರಣೆಯನ್ನು ಜವಾಬ್ದಾರಿಯುತವಾಗಿ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿ ತಂತ್ರಾಂಶದಲ್ಲಿ ದಾಖಲಿಸಬೇಕು. ನೋಟಿಸ್ ಗೆ ಸಂಬಂಧಿಸಿದ ಅಹವಾಲುಗಳನ್ನು ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಸೂಚಿಸಿದರು.
ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಬಿ.ಎಲ್.ಓ.ಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದು, ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದು, ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗಾಗಿ ಕೈಗೊಂಡಂತಹ ಕ್ರಮಗಳನ್ನು ಇತರ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪ್ರಶಂಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಸಿದ್ದು ಹುಲ್ಲೋಳಿ ಮಾತನಾಡಿ, ಆ.24 ರಂದು ಕರಡು ಪ್ರತಿಯನ್ನು ಪ್ರಕಟಿಸಲಾಗುತ್ತಿದ್ದು, ಒಂದು ತಿಂಗಳು ಕಾಲ ಆಕ್ಷೇಪಣೆಗಳನ್ನು ಸ್ವೀಕರಿಸಲು ಕಾಲಾವಕಾಶವಿರುತ್ತದೆ.
ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿಗೆ 126 ಹೆಚ್ಚುವರಿ ಎ.ಇ.ಆರ್.ಒ ಗಳನ್ನು ನೇಮಿಸಲಾಗಿದ್ದು ಇವರು ತಮ್ಮ ಲಾಗಿನ್ ನಲ್ಲಿ ನೋಟೀಸ್ ಜನರೇಟ್ ಮಾಡಬೇಕು. ನೋಟಿಸ್ ಸಂಬಂಧಪಟ್ಟಂತೆ ಅಹವಾಲುಗಳನ್ನು ಆಲಿಸಲು ವಾರ್ಡ್‌ವಾರು, ಗ್ರಾಮ ಪಂಚಾಯತ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಸಂಭಾವನೀಯ ತಪ್ಪುಗಳಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸುವುದು ಸೇರಿದಂತೆ ವಿವಿಧ ಹಂತಗಳನ್ನು ಪ್ರಾತ್ಯಕ್ಷಿಕೆ ಮೂಲಕ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಗುಲಾಬರಾವ್ ಭೂಷಣ ಬೋರಸೆ, ಪ್ರಶಿಕ್ಷಣಾರ್ಥಿ ಐ.ಎ.ಎಸ್. ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬಾಗಲಕೋಟ ಅಪರ ಜಿಲ್ಲಾಧಿಕಾರಿ, ಎ.ಇ.ಆರ್., ಒ. ಇ.ಆರ್.ಒ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.
