Belagavi

ಮೈದುಂಬಿ ಹರಿಯುತ್ತಿರುವ ಕಿಟವಾಡ ಜಲಪಾತ: ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಪ್ರಕೃತಿಯ ಸೌಂದರ್ಯ …

Share

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸಮೀಪದ ಸುಂದರ ಕಿಟವಾಡ ಜಲಪಾತ ಮೈದುಂಬಿ ಹರಿಯುತ್ತಿದ್ದು, ನಿಸರ್ಗ ಪ್ರಿಯರ ಮನ ಸೆಳೆಯುತ್ತಿದೆ. ವಾರಾಂತ್ಯದ ರಜಾದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಜಲಧಾರೆಯ ಸೌಂದರ್ಯವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳಗಾವಿ ಸಮೀಪದ ಕಿಟವಾಡ ಫಾಲ್ಸ್ ಜಲವೈಭವದಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ದಂಡೇ ಇಲ್ಲಿಗೆ ಹರಿದುಬರುತ್ತಿದೆ. ಸುತ್ತಲೂ ಹಚ್ಚ ಹಸಿರಿನ ಬೆಟ್ಟಗುಡ್ಡಗಳು, ಚೆಕ್ ಡ್ಯಾಂನಿಂದ ನಿಧಾನವಾಗಿ ಬಂದು ಕಡಿದಾದ ಕಲ್ಲುಗಳ ನಡುವೆ ಧುಮ್ಮಿಕ್ಕುವ ಹಾಲ್ನೊರೆಯಂತಹ ಜಲಧಾರೆ ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತಿದೆ. ಮಹಾರಾಷ್ಟ್ರದ ಚಂದಗಡ ತಾಲೂಕಿಗೆ ಒಳಪಡುವ ಈ ಜಲಪಾತವು ಬೆಳಗಾವಿಯಿಂದ ಕೇವಲ 20 ಕಿ.ಮೀ (ಕಂಗ್ರಾಳಿ ಕೆ.ಎಚ್., ಅಗಸಗಿ, ಹಂದಿಗನೂರು ಮಾರ್ಗ) ಅಂತರದಲ್ಲಿದ್ದು, ಕುಂದಾನಗರಿಯ ಜನರಿಗೆ ಅರ್ಧ ಗಂಟೆಯ ಪ್ರಯಾಣದಲ್ಲಿ ತಲುಪಬಹುದಾದ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿದೆ. ಭಾನುವಾರ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಯುವಕ-ಯುವತಿಯರು ಜಲಪಾತದ ಬಳಿ ಛಾಯಾಚಿತ್ರ ತೆಗೆಸಿಕೊಂಡು, ಈಜಾಡಿ ಸಂಭ್ರಮಿಸುತ್ತಿದ್ದಾರೆ.

Tags:

error: Content is protected !!