ಖಾನಾಪುರ ತಾಲೂಕಿನ ಹಲಸಿ ಬಸ್ ನಿಲ್ದಾಣದಿಂದ ಹಲಸಿವಾಡಿ ಹಾಗೂ ಗುಂಡಪ್ಪಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಗೊಂಡು ಕೇವಲ 4 ತಿಂಗಳಿಗೆ ಸಂಪೂರ್ಣ ಕಿತ್ತುಹೋಗಿದೆ. ಲಕ್ಷಾಂತರ ರೂಪಾಯಿ ಸರ್ಕಾರಿ ಅನುದಾನ ಪೋಲಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ವಹಿಸಿದ ಎಂಜಿನಿಯರ್‌ಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ನಡೆದ ಹಲಸಿ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಜನವರಿ-ಫೆಬ್ರವರಿ ಅವಧಿಯಲ್ಲಿ ಡಾಂಬರೀಕರಣಗೊಳಿಸಲಾಗಿದ್ದ ಹಲಸಿ ಬಸ್ ನಿಲ್ದಾಣ-ಹಲಸಿವಾಡಿ-ಗುಂಡಪ್ಪಿ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟಿದೆ. ಸಾಧಾರಣ ಮಳೆಯಾಗಿದ್ದರೂ ರಸ್ತೆಯ ಮೇಲ್ಮೈ ಪದರ ಕಿತ್ತುಬಂದಿದ್ದು, ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿ ಕಾರಲಗಾ ಗ್ರಾಮದ ಜಾತ್ರೆ ಬರಲಿದ್ದು, ಆ ಹಿನ್ನೆಲೆಯಲ್ಲಿ ಲಾಲವಾಡಿ-ಚಾಪಗಾವ್ ರಸ್ತೆ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸದೇ ದೀಪಾವಳಿಯಿಂದಲೇ ಆರಂಭಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಸರ್ಕಾರಿ ಹಣ ನೀರಿನಲ್ಲಿ ಹೋಮವಾಗದಂತೆ ಸಂಬಂಧಿತ ಇಲಾಖೆಯ ತಾಂತ್ರಿಕ ತಂಡ ತಕ್ಷಣವೇ ಪರಿಶೀಲನೆ ನಡೆಸಿ, ತಪ್ಪಿತಸ್ಥ ಗುತ್ತಿಗೆದಾರರಿಂದಲೇ ಸ್ವಂತ ವೆಚ್ಚದಲ್ಲಿ ಮತ್ತೆ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
