Khanapur

ಖಾನಾಪುರ: ೧೯ ವರ್ಷಗಳ ನಂತರ ಕ್ಯಾರಲಗಾ ಶ್ರೀ ಮಹಾಲಕ್ಷ್ಮಿ ಮಹಾಯಾತ್ರೆ!

Share

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕ್ಯಾರಲಗಾ, ಶಿವೋಲಿ ಮತ್ತು ಕ್ಯಾರಲಗಾಹಟ್ಟಿ ಗ್ರಾಮಗಳ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮಿ ದೇವಿಯ ಮಹಾಯಾತ್ರೆಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಬರೋಬ್ಬರಿ ೧೯ ವರ್ಷಗಳ ಸುದೀರ್ಘಾವಧಿಯ ನಂತರ ನಡೆಯುತ್ತಿರುವ ಈ ಐತಿಹಾಸಿಕ ಯಾತ್ರೆಯ ಪೂರ್ವಭಾವಿ ಸಭೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆಯನ್ನು ಶಾಸಕ ವಿಠ್ಠಲ ಹಲಗೇಕರ ನೆರವೇರಿಸಿದ್ದಾರೆ.

ಮುಂದಿನ ವರ್ಷ, ಅಂದರೆ ೨೦೨೭ರ ಫೆಬ್ರವರಿ ೨೪ ರಿಂದ ಮಾರ್ಚ್ ೪ರವರೆಗೆ ಸತತ ೯ ದಿನಗಳ ಕಾಲ ಈ ವೈಭವದ ಮಹಾಯಾತ್ರೋತ್ಸವ ನಡೆಯಲಿದೆ. ಯಾತ್ರೆಯ ಸಂದರ್ಭದಲ್ಲಿ ದೇವಿ ವಿರಾಜಮಾನಳಾಗುವ ಸ್ಥಳದ ನವೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ವಿಠ್ಠಲ ಹಲಗೇಕರ, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ರಸ್ತೆ, ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಹಾಗೂ ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಶಾಸಕರಾಗಿ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಈ ಉತ್ಸವದ ಯಶಸ್ಸಿಗೆ ಶ್ರಮಿಸುವುದಾಗಿ ಅವರು ತಿಳಿಸಿದರು.

ಹಿರಿಯ ಮುಖಂಡ ಮನೋಹರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ವಿವಿಧ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಟ್ಟರೂ ಮೂರೂ ಗ್ರಾಮಗಳ ಗ್ರಾಮಸ್ಥರು ತೋರಿದ ಒಗ್ಗಟ್ಟು ಮತ್ತು ಶ್ರದ್ಧೆಯನ್ನು ಶಾಸಕರು ಶ್ಲಾಘಿಸಿದರು. ಈ ಮಹತ್ವದ ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಸಾನಿಕೊಪ್ಪ, ಪ್ರಮುಖರಾದ ಧನಶ್ರೀ ಸರ್ದೇಸಾಯಿ, ಜ್ಯೋತಿಬಾ ರೆಮಾನಿ, ಮಲ್ಲಪ್ಪ ಮಾರಿಹಾಳ, ಸುಂದರ ಕುಲಕರ್ಣಿ, ದತ್ತಾ ಕದಮ್ ಹಾಗೂ ಗ್ರಾಮ ಪಂಚಾಯತಿ ಪಿಡಿಒಗಳು, ಯಾತ್ರಾ ಕಮಿಟಿ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!