Belagavi

ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ರೊಚ್ಚಿಗೆದ್ದ ಆಕ್ರೋಶ! ಹಿರೇಬಾಗೇವಾಡಿ ಟೋಲ್ ಬಳಿ ಹೈವೇ ಬಂದ್‌!

Share

ಸಂಪುಟ ಸೇರ್ಪಡೆ ಕೈತಪ್ಪಿದ್ದಕ್ಕೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ಆಕ್ರೋಶ ಮುಗಿಲು ಮುಟ್ಟಿದೆ. ಬೆಳಗಾವಿಯ ಹಿರೇಬಾಗೇವಾಡಿ ಟೋಲ್’ನಲ್ಲಿ ಹೆಬ್ಬಾಳ್ಕರ್ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ತೀವ್ರ ಪ್ರಯತ್ನ ನಡೆಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊನೆಗೂ ತೀವ್ರ ನಿರಾಸೆಯಾಗಿದೆ. ಸಂಪುಟದಲ್ಲಿ ಸ್ಥಾನ ಸಿಗದಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಬೆಳಗಾವಿಯಲ್ಲಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿ ತಡೆದು ಭಾರಿ ಧರಣಿ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಕಡಿದುಹೋಗಿ ಸಾರ್ವಜನಿಕರು ಪರದಾಡುವಂತಾಯಿತು. ಧರಣಿ ಕುಳಿತ ಅಭಿಮಾನಿಗಳು, ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಬೊಬ್ಬೆ ಹೊಡೆದು ತಮ್ಮ ಅಸಮಾಧಾನ ಪ್ರದರ್ಶಿಸಿದರು.

ನಂತರ ನಮ್ಮ ಹಿರೇಬಾಗೇವಾಡಿ ಭಾಗಕ್ಕೆ ಕಾಂಗ್ರೆಸ್‌ನಿಂದ ಯಾರೂ ಎಂಎಲ್‌ಎ ಆಗಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೆದ್ದು ಬಂದ ನಂತರ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಸರ್ಕಾರ ಮತ್ತು ಹೈಕಮಾಂಡ್ ಅವರ ಕಾರ್ಯವೈಖರಿ ನೋಡಿ ಮಂತ್ರಿ ಸ್ಥಾನ ಕೊಟ್ಟೇ ಕೊಡುತ್ತಾರೆ ಎಂದು ನಾವು ಭಾವಿಸಿ ಯಾವುದೇ ಪ್ರತಿಭಟನೆ ಅಥವಾ ಹೋರಾಟಕ್ಕೆ ಇಳಿದಿರಲಿಲ್ಲ. ಆದರೆ, ಇವತ್ತು ಗ್ರಾಮೀಣ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಸತ್ಯ ತಿಳಿದುಬಂದಿದೆ. ರಾಹುಲ್ ಗಾಂಧಿಯವರು ಗ್ರಾಮೀಣ ಭಾಗವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳುತ್ತಾರೆ, ಆದರೆ ಇವತ್ತು ನಮಗೆ ಅನ್ಯಾಯವಾಗಿದೆ. ನಮ್ಮ ಅಕ್ಕನವರಿಗೆ ಮಂತ್ರಿ ಸ್ಥಾನ ಸಿಗುವವರೆಗೂ, ಅಭಿವೃದ್ಧಿಯ ಹರಿಕಾರೆಗೆ ಮಂತ್ರಿ ಪದವಿ ನೀಡುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ; ತಪ್ಪಿದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ದರ್ಗಾ ಅಜ್ಜನವರು ಹೇಳಿದರು.

Tags:

error: Content is protected !!