Belagavi

ನೇಕಾರರ ಶ್ರಮಕ್ಕೆ ಗೌರವ: ಬೆಳಗಾವಿಯಲ್ಲಿ ‘ಪ್ರತಿಭಾ ಪುರಸ್ಕಾರ ಹಾಗೂ ನೇಕಾರ ರತ್ನ’ ಪ್ರಶಸ್ತಿ ಪ್ರದಾನ!

Share

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವೊಂದು ಜರುಗಿದೆ. ನೇಕಾರ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ‘ನೇಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಅಖಿಲ ಭಾರತ ದೇವಾಂಗ ಜನಾಂಗದ ಜಗದ್ಗುರುಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನೇಕಾರ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಪ್ರತಿಭಾ ಪುರಸ್ಕಾರ ಹಾಗೂ ‘ನೇಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್, “ನೇಕಾರ ಸಮಾಜವು ಶ್ರಮಿಕ ಹಾಗೂ ಸ್ವಾಭಿಮಾನಿ ಸಮಾಜವಾಗಿದೆ. ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಂದೇ ವೇದಿಕೆಗೆ ತಂದು 125ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿರುವುದು ಮತ್ತು ಸಾಧಕರಿಗೆ ‘ನೇಕಾರ ರತ್ನ’ ನೀಡಿದ್ದು ನಿಜಕ್ಕೂ ಶ್ಲಾಘನೀಯ,” ಎಂದು ಸಂಘಟಕರನ್ನು ಅಭಿನಂದಿಸಿದರು. ಇದೇ ವೇಳೆ ಆಯೋಜಕ ಶ್ರೀ ಗಜಾನನ ಗುಂಜೇರಿ ಮಾತನಾಡಿ, “ನಾವು ಇಂದು ಅಂಕಗಳನ್ನು ಸನ್ಮಾನಿಸುತ್ತಿಲ್ಲ, ಹೆತ್ತವರ ತ್ಯಾಗ ಮತ್ತು ಬೆವರನ್ನು ಸನ್ಮಾನಿಸುತ್ತಿದ್ದೇವೆ,” ಎಂದು ಭಾವನಾತ್ಮಕವಾಗಿ ನುಡಿದರು.

ಚಿಂತಕ ವಿರೇಶ್ ಪಾಟೀಲ್ ಚಿಕ್ಕೋಡಿ ತಮ್ಮ ಪ್ರೇರಣಾದಾಯಿ ಭಾಷಣದ ಮೂಲಕ ಸಭಿಕರ ಮನ ಗೆದ್ದರೆ, ಮುಖ್ಯ ಅತಿಥಿಗಳಾಗಿ ಡಿಸಿಪಿ ನಾರಾಯಣ ಭರಮಣಿ ಹಾಗೂ ಗ್ಯಾನಪ್ಪ ವಾಗೂಕರ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ದೇವಾಂಗ, ಕುರುಹಿನಶೆಟ್ಟಿ, ಸಕುಳಸಾಳಿ, ಪಟ್ಟಸಾಲಿ, ಪದ್ಮಸಾಲಿ ಹಾಗೂ ನಾಮದೇವ ಶಿಂಪಿ ಸೇರಿದಂತೆ ವಿವಿಧ ಒಳಪಂಗಡಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಶಂಕರಣ್ಣ ಮುರುಡಿ, ಲಕ್ಷ್ಮಣ ಜೋಗಿನ, ಭುಜಂಗ ಭಂಡಾರಿ ಮತ್ತು ಶಿವರಾಜ ಮುರುಡಿ ಅವರಿಗೆ ‘ನೇಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಕ್ಕೂಟದ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ, ಲೋಹಿತ್ ಮೊರಕರ ಸೇರಿದಂತೆ ಹಲವು ಪ್ರಮುಖರು ಹಾಗೂ ಸಾವಿರಾರು ಸಭಿಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

Tags:

error: Content is protected !!