Athani

ಕಬ್ಬಿಗೆ ಪ್ರತಿ ಟನ್‌ಗೆ 6,500 ರೂ. ವೈಜ್ಞಾನಿಕ ದರ ನಿಗದಿಗಾಗಿ ಆಗ್ರಹ: ಕೇಂದ್ರ ಸಚಿವ ಜೋಶಿ ನಿವಾಸಕ್ಕೆ ಮುತ್ತಿಗೆ ಎಚ್ಚರಿಕೆ

Share

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 6,500 ರೂಪಾಯಿ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೈತ ಮುಖಂಡ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಬೃಹತ್ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ 23ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ಮಾತನಾಡಿದ ರೈತ ಮುಖಂಡ ಶಶಿಕಾಂತ ಗುರೂಜಿ, ಮಾರುಕಟ್ಟೆಯಲ್ಲಿ ಸಕ್ಕರೆ ದರ ಹಾಗೂ ಕೃಷಿ ಉತ್ಪಾದನಾ ವೆಚ್ಚವು ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಅದರ ಆರ್ಥಿಕ ಲಾಭ ಕಬ್ಬು ಬೆಳೆಗಾರರಿಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಸಗೊಬ್ಬರ, ಯೂರಿಯಾ, ಬಿತ್ತನೆ, ಕಟಾವು ಮತ್ತು ಸಾಗಾಣಿಕೆ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಜಾರಿಯಲ್ಲಿರುವ ಎಫ್‌ಆರ್‌ಪಿ ಹಾಗೂ ಎಂಎಸ್‌ಪಿ ದರಗಳು ರೈತರ ನೈಜ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ವಿಫಲವಾಗಿವೆ ಎಂದು ತಿಳಿಸಿದರು.

ರೈತರ ಈ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮುಂಬರುವ ಸೆಪ್ಟೆಂಬರ್ 23ರಂದು ಒಂದು ಲಕ್ಷ ಕಬ್ಬು ಬೆಳೆಗಾರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಘೋಷಿಸಿದರು. ರಾಜ್ಯದ 31 ಜಿಲ್ಲೆಗಳ ಕಬ್ಬು ಬೆಳೆಗಾರರ ಕುಟುಂಬಗಳ ಆರ್ಥಿಕ ಹಿತದೃಷ್ಟಿಯಿಂದ ಕೂಡಲೇ ವೈಜ್ಞಾನಿಕ ದರ ಘೋಷಿಸಬೇಕು ಎಂದು ಆಗ್ರಹಿಸಿದರು.

Tags:

error: Content is protected !!