Belagavi

ಬೆಳಗಾವಿ: ಸರ್ವರ್ ಕೈಕೊಟ್ಟು ಕಣ್ಣೀರಿಟ್ಟ ಜನ; ಪಡಿತರ ಪಡೆಯಲು ಪರದಾಟ

Share

ಬೆಳಗಾವಿ ಜಿಲ್ಲೆಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯು ತೀವ್ರ ಸರ್ವರ್ ಸಮಸ್ಯೆಯಿಂದ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಿಂಗಳ ಕೊನೆಯ ದಿನವಾದ ಇಂದು ಪಡಿತರ ಪಡೆದುಕೊಳ್ಳಲು ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳ ಮುಂದೆ ಮುಗಿಬಿದ್ದಿದ್ದು, ನೆಟ್‌ವರ್ಕ್ ಇಲ್ಲದೆ ಪರದಾಡುವಂತಾಗಿದೆ. ಗೋಕಾಕ ತಾಲೂಕಿನ ಕೊಣ್ಣೂರು ಹಾಗೂ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮ ಸೇರಿದಂತೆ ಜಿಲ್ಲೆಯ ಹಲವೆಡೆ ಇದೇ ಗಂಭೀರ ಸಮಸ್ಯೆ ಎದುರಾಗಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ಪಡಿತರ ವಿತರಣೆಗೆ ಸರ್ವರ ಸಮಸ್ಯೆ ಎದುರಾಗಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಹಾಗೂ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಪಡಿತರದಾರರ ಪರದಾಟ ಹೇಳತೀರದಾಗಿದೆ.ಸರ್ವರ್ ಸಂಪೂರ್ಣವಾಗಿ ಕೈಕೊಟ್ಟಿರುವುದು ಹಾಗೂ ಬಯೋಮೆಟ್ರಿಕ್ ವ್ಯವಸ್ಥೆಯು ಅತ್ಯಂತ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿರುವುದು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಬೆಳಗ್ಗೆಯಿಂದಲೇ ಸಾಲಿನಲ್ಲಿ ಬಂದು ನಿಂತರೂ ಸರ್ವರ್ ಸಿಗದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಬಡವರು ಮತ್ತು ಕೂಲಿ ಕಾರ್ಮಿಕರು ತಮ್ಮ ದಿನಗೂಲಿಯನ್ನು ಬಿಟ್ಟು ರೇಷನ್ಗಾಗಿ ಕಾಯುವ ದುಸ್ಥಿತಿ ಎದುರಾಗಿದೆ.

ಇಲ್ಲಿಯವರೆಗೆ ಕೇವಲ ಶೇಕಡಾ 50ರಷ್ಟು ಕಾರ್ಡುದಾರರಿಗೆ ಮಾತ್ರ ಪಡಿತರ ವಿತರಣೆ ಮಾಡಲು ಸಾಧ್ಯವಾಗಿದ್ದು, ಉಳಿದವರು ಹೈರಾಣಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದರೂ ಪಡಿತರ ಸಿಗದೆ ಜನರು ರೋಸಿಹೋಗಿದ್ದಾರೆ. ಸರ್ಕಾರದ ಬೇಜವಾಬ್ದಾರಿ ಹಾಗೂ ತಾಂತ್ರಿಕ ವೈಫಲ್ಯದಿಂದಾಗಿ ಬಡವರು ಹಸಿವು ಮತ್ತು ಆರ್ಥಿಕ ನಷ್ಟ ಎರಡನ್ನೂ ಅನುಭವಿಸುವಂತಾಗಿದೆ.

ಈ ತಾಂತ್ರಿಕ ಸಮಸ್ಯೆಯಿಂದಾಗಿ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಸರ್ವರ್ ದೋಷವನ್ನು ಸರಿಪಡಿಸಿ, ಎಲ್ಲರಿಗೂ ಸುಲಭವಾಗಿ ಪಡಿತರ ಸಿಗುವಂತೆ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!