ಬೆಳಗಾವಿ ತಾಲೂಕಿನ ಕುಟ್ಟಲವಾಡಿ ಗ್ರಾಮದಲ್ಲಿ ಉತ್ತಮ ರಸ್ತೆಯಿದ್ದರೂ ಸಾರಿಗೆ ಸಂಸ್ಥೆ ಬಸ್ ಸೌಲಭ್ಯ ಕಲ್ಪಿಸದ ಕಾರಣ ಶಾಲಾ ಮಕ್ಕಳು ಪ್ರತಿದಿನ ೪ ಕಿಲೋಮೀಟರ್ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ಥಳೀಯ ಮುಖಂಡ ಮಾರುತಿ ದೊಡ್ಡಲಕ್ಕಪ್ಪಗೋಳ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿ ಮಾದರಿಯಾಗಿದ್ದು, ಕೂಡಲೇ ಬಸ್ ಬಿಡದಿದ್ದರೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಬೆಳಗಾವಿ ೨ನೇ ಘಟಕದ ಸಾರಿಗೆ ಅಧಿಕಾರಿಗಳ ಉಡಾಫೆಯಿಂದಾಗಿ ಕುಟ್ಟಲವಾಡಿ ಗ್ರಾಮದ ಮಕ್ಕಳು ಪ್ರತಿದಿನ ಶಾಲೆಗೆ ಹೋಗಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಕಿತ್ತೂರು ಕರ್ನಾಟಕ ಸೇನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ದೊಡ್ಡಲಕ್ಕಪ್ಪಗೋಳ ಅವರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಮಾರುತಿ ಅವರು ತಮ್ಮ ಸ್ವಂತ ವೆಚ್ಚದಲ್ಲಿಯೇ ವಾಹನದ ವ್ಯವಸ್ಥೆ ಮಾಡಿ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರಿಗೆ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಗ್ರಾಮಕ್ಕೆ ಹೆಚ್ಚುವರಿ ಬಸ್ ಸೇವೆ ಆರಂಭಿಸಬೇಕು, ಇಲ್ಲವಾದಲ್ಲಿ ಇಲಾಖೆಯ ನಡೆಸುವುದಾಗಿ ಸಾರಿಗೆ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

