ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ 756 ಎಕರೆ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡು ಮಂಡಳಿ ವ್ಯಾಪ್ತಿಯ ನಾಗರಿಕ ಪ್ರದೇಶಗಳನ್ನು ಸ್ಥಳೀಯ ನಗರ ಸಂಸ್ಥೆಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಇದರ ಭಾಗವಾಗಿ ಬೆಳಗಾವಿ ದಂಡು ಮಂಡಳಿಯ ವ್ಯಾಪ್ತಿಯಲ್ಲಿರುವ ಮನೆಗಳು, ವಾಣಿಜ್ಯ ಮಳಿಗೆಗಳು, ಬಂಗಲೆಗಳು, ಖಾಲಿ ಜಾಗಗಳು, ಮಾರುಕಟ್ಟೆಗಳು ಹಾಗೂ ರಸ್ತೆಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಸುಮಾರು 700 ಪುಟಗಳ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದರು.
ಒಟ್ಟು 756 ಎಕರೆ ಪ್ರದೇಶದ ಕುರಿತು ಸಿದ್ಧಪಡಿಸಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ವರದಿಯನ್ನು ಪರಿಶೀಲಿಸಿದ ಬಳಿಕ ಸಚಿವ ಸಂಪುಟದ ಮುಂದೆ ಮಂಡಿಸಲಿದೆ. ನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಕೇಂದ್ರದ ಅನುಮೋದನೆ ದೊರೆತ ಬಳಿಕವೇ ನಾಗರಿಕ ಪ್ರದೇಶಗಳ ಹಸ್ತಾಂತರ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ದಂಡು ಮಂಡಳಿ ಸದ್ಯ ಸುಮಾರು 350 ಕೋಟಿ ರೂ
ಸಾಲದ ಹೊರೆಯಲ್ಲಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ಪ್ರದೇಶಗಳ ನಿರ್ವಹಣೆ ಹಾಗೂ ಆಡಳಿತವನ್ನು ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸುವ ಅಗತ್ಯ ಎದುರಾಗಿದೆ. ಹಸ್ತಾಂತರದ ಸಂದರ್ಭದಲ್ಲಿ ದಂಡು ಮಂಡಳಿಯ ಆಸ್ತಿಗಳ ದುರ್ಬಳಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಕೇಂದ್ರ ಸರ್ಕಾರ ಆಯ್ದ ದಂಡು ಮಂಡಳಿಗಳ ನಾಗರಿಕ ಪ್ರದೇಶಗಳನ್ನು ಬೇರ್ಪಡಿಸಿ, ಸಮೀಪದ ನಗರ ಸ್ಥಳೀಯ ಸಂಸ್ಥೆಗಳು ಅಥವಾ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದೆ. ಆದರೆ ಮಿಲಿಟರಿ ಬಳಕೆಯಲ್ಲಿರುವ ಪ್ರದೇಶಗಳನ್ನು ಪ್ರತ್ಯೇಕ ಸೇವಾ ನಿಲ್ದಾಣಗಳಾಗಿ ಮುಂದುವರಿಸುವ ಉದ್ದೇಶ ಹೊಂದಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಚರ್ಚೆ ಹಾಗೂ ಅನುಮೋದನೆಯ ಬಳಿಕ ಬೆಳಗಾವಿ ದಂಡು ಮಂಡಳಿಯ ನಾಗರಿಕ ಪ್ರದೇಶಗಳ ಹಸ್ತಾಂತರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
