Belagavi

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಪರದಾಟ: ವಿಶ್ರಾಂತಿ ಕೊಠಡಿಯಿಲ್ಲದೆ ಬಸ್‌ನಲ್ಲೇ ರಾತ್ರಿ ಕಳೆಯುವ ದುಸ್ಥಿತಿ!

Share

ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಆಗಮಿಸುವ ಬಸ್ ಚಾಲಕರು ಮತ್ತು ನಿರ್ವಾಹಕರು ಕನಿಷ್ಠ ಸೌಲಭ್ಯಗಳ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾದಗಿರಿ, ಮೈಸೂರು, ಕಲಬುರಗಿ, ಬಳ್ಳಾರಿ, ಬಸವಕಲ್ಯಾಣ ಸೇರಿದಂತೆ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಬೆಳಗಾವಿಗೆ ಆಗಮಿಸುವ ಚಾಲಕರು ಹಾಗೂ ನಿರ್ವಾಹಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ಕೊಠಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದರಿಂದ ಪ್ರತಿದಿನ ಪರದಾಡುವಂತಾಗಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಸುಮಾರು ಒಂದೂವರೆ ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬೆಳಗಾವಿಗೆ ಆಗಮಿಸುವ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ಕಲ್ಪಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಬಸ್‌ಗಳಲ್ಲೇ ವಿಶ್ರಾಂತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೊಳ್ಳೆಗಳ ಕಾಟ, ಬಿಸಿಲು ಹಾಗೂ ಮಳೆಯ ನಡುವೆಯೇ ರಾತ್ರಿ ಕಳೆಯಬೇಕಾಗಿದೆ. ಇದರಿಂದ ಸರಿಯಾಗಿ ನಿದ್ರೆ ಆಗದೆ, ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.
“ರಾತ್ರಿಯಿಡೀ ಬಸ್ ಚಾಲನೆ ಮಾಡಿದ ಬಳಿಕ ಸರಿಯಾದ ವಿಶ್ರಾಂತಿ ಸಿಗದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಪ್ರಯಾಣಿಕರ ಜೀವಕ್ಕೆ ಏನಾದರೂ ಅಪಾಯವಾದರೆ ಅದರ ಹೊಣೆ ಯಾರು ಹೊರುತ್ತಾರೆ?” ಎಂದು ಅಧಿಕಾರಿಗಳನ್ನು ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬೆಳಗಾವಿ ಜಿಲ್ಲೆಯವರಾಗಿದ್ದರೂ ಇಲ್ಲಿನ ಸಿಬ್ಬಂದಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚಾಲಕರು ಮತ್ತು ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ತಕ್ಷಣ ಒದಗಿಸಿ, ಸುರಕ್ಷಿತ ಹಾಗೂ ಮಾನವೀಯ ಕೆಲಸದ ವಾತಾವರಣ ನಿರ್ಮಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

Tags:

error: Content is protected !!