ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದಲ್ಲಿರುವ ಬಾರ್‌ನಿಂದಾಗಿ ಯುವಕರು ಮದ್ಯವ್ಯಸನಿಗಳಾಗಿ ಸಾವು-ನೋವು ಅನುಭವಿಸುತ್ತಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಅದನ್ನು ತಕ್ಷಣವೇ ಬಂದ್ ಮಾಡುವಂತೆ ‘ಕರ್ನಾಟಕ ಬಹುಜನ ಚಳುವಳಿ’ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಬೆಳಗಾವಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.


ಗ್ರಾಮದ ರಸ್ತೆ ಬದಿಯಲ್ಲಿರುವ ಈ ಬಾರ್‌ನಿಂದಾಗಿ ಅನೇಕ ಯುವಕರು ಕಿಡ್ನಿ ಹಾಗೂ ಲಿವರ್ ವೈಫಲ್ಯಕ್ಕೆ ಒಳಗಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಅಲ್ಲದೆ, ಕುಡುಕರ ಹಾವಳಿಯಿಂದ ಶಾಲಾ ವಿದ್ಯಾರ್ಥಿನಿಯರು, ರೈತರು ಹಾಗೂ ಮಹಿಳೆಯರು ರಸ್ತೆಯಲ್ಲಿ ಓಡಾಡಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಅರ್ಜಿಯನ್ನು ಸ್ವೀಕರಿಸಿದ 7 ದಿನಗಳ ಒಳಗಾಗಿ ಸಂಬಂಧಿಸಿದ ಇಲಾಖೆಯು ಸೂಕ್ತ ಕ್ರಮ ಕೈಗೊಂಡು ಬಾರ್ ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರೆಲ್ಲರೂ ಸೇರಿ ಬಾರ್ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಗ್ರಾಮಸ್ಥರ ಪರವಾಗಿ ಗೀತಾ ಪೂಜಾರ ಅವರು, “ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಧಾಬಾ ಹಾಗೂ ಬಾರ್‌ನಿಂದಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಭದ್ರತೆಗೆ ತೀವ್ರ ಧಕ್ಕೆಯಾಗುತ್ತಿದ್ದು, ಅದನ್ನು ತಕ್ಷಣವೇ ಗ್ರಾಮದಿಂದ ಬೇರೆಡೆಗೆ ಸ್ಥಳಾಂತರಿಸಬೇಕು. ಹೊಲಗಳಿಗೆ ಹೋಗುವ ಪ್ರಮುಖ ರಸ್ತೆಯ ಪಕ್ಕದಲ್ಲೇ ಕೃಷ್ಣಾ ಕಲಾಲ್ ಎಂಬುವವರು ನಡೆಸುತ್ತಿರುವ ಈ ಧಾಬಾ ಇರುವುದರಿಂದ ಹರೆಯದ ಹೆಣ್ಣುಮಕ್ಕಳು ಓಡಾಡಲು ಭಯಪಡುವಂತಾಗಿದೆ” ಎಂದು ಮನವಿ ಮಾಡಿದರು. ಇದೇ ವೇಳೆ ಗೀತಾ ಅವರು ತಮ್ಮ ಪತಿಯೂ ಸಹ ತೀವ್ರ ಕುಡಿತದ ಚಟದಿಂದಾಗಿ 25ನೇ ವಯಸ್ಸಿನಲ್ಲಿಯೇ ತೀರಿಕೊಂಡಿದ್ದು, ಪ್ರಸ್ತುತ ಮೂವರು ಸಣ್ಣ ಹೆಣ್ಣುಮಕ್ಕಳನ್ನು ಸಾಕಲು ತಾವು ಪಡುತ್ತಿರುವ ಕಷ್ಟವನ್ನು ಕಣ್ಣೀರಿಡುತ್ತ ತೋಡಿಕೊಂಡರು. “ಸರ್ಕಾರದಿಂದ ಮಹಿಳೆಯರ ಖಾತೆಗೆ ಜಮೆಯಾಗುವ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನೂ ಪುರುಷರು ಬ್ಯಾಂಕಿನಿಂದ ಪಡೆದು ನೇರವಾಗಿ ಧಾಬಾದಲ್ಲಿ ಕುಡಿತಕ್ಕೆ ಪೋಲು ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಮದ ಸೊಸೆಯಂದಿರು ಮತ್ತು ಮಹಿಳೆಯರ ನೆಮ್ಮದಿಯ ಜೀವನಕ್ಕಾಗಿ ಈ ಧಾಬಾವನ್ನು ತಕ್ಷಣವೇ ತೆರವುಗೊಳಿಸಬೇಕು” ಎಂದು ಅವರು ಕಟ್ಟುನಿಟ್ಟಾಗಿ ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ಬಹುಜನ ಚಳುವಳಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
