ಬೆಳಗಾವಿಯ ಹಳೆ ಬೆಳಗಾವಿ ಪ್ರದೇಶದ ನಿವಾಸಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೂಕ್ತ ಬಸ್ ನಿಲ್ದಾಣವಿಲ್ಲದೆ ಪ್ರತಿದಿನ ತೀವ್ರ ಪರದಾಟ ನಡೆಸುವಂತಾಗಿದೆ. ಈ ಸಂಬಂಧ ಪವನ್ ಗಡಿವಡ್ಡರ್ ಅವರು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳುಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಬಿಟಿ ಭಾಗದಿಂದ ಹಳೆ ಬೆಳಗಾವಿಗೆ ಬಸ್‌ಗಳು ಸಂಚರಿಸುತ್ತಿದ್ದರೂ, ಹಿಂತಿರುಗುವ ದಿಕ್ಕಿನಲ್ಲಿ ಸೂಕ್ತ ಬಸ್ ನಿಲ್ದಾಣದ ಸೌಲಭ್ಯವಿಲ್ಲದೆ ಸಾರ್ವಜನಿಕರು, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಬಿಸಿಲು-ಮಳೆಯಲ್ಲಿ ರಸ್ತೆ ಬದಿಯಲ್ಲೇ ಅಪಾಯಕಾರಿಯಾಗಿ ಕಾಯಬೇಕಾದ ಅಸೌಕರ್ಯ ಎದುರಾಗಿದೆ. ಈ ಮೂಲಭೂತ ಸಮಸ್ಯೆಯನ್ನು ಬಗೆಹರಿಸಲು ಪಿ.ಎಸ್.ಆರ್. ಮಾನವ ಹಕ್ಕುಗಳ ರಕ್ಷಣಾ ಮಂಡಳಿಯ ಬೆಳಗಾವಿ ನಗರ ಸೋಷಿಯಲ್ ಮೀಡಿಯಾ ಅಧ್ಯಕ್ಷರಾದ ಪವನ್ ಗಾಡಿವಡ್ಡರ್ ಅವರು ನಾಲ್ಕು ತಿಂಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಇಷ್ಟು ತಿಂಗಳು ಕಳೆದರೂ ಆಡಳಿತ ಯಂತ್ರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಈಗ ಪವನ್ ಗಾಡಿವಡ್ಡರ್ ಅವರು ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಬಲವಾದ ಮನವಿ ಸಲ್ಲಿಸಿ ಶೀಘ್ರ ಬಸ್ ನಿಲ್ದಾಣ ನಿರ್ಮಿಸದಿದ್ದರೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
