ಮುಖ್ಯಮಂತ್ರಿಗಳು ತಂಗಿರುವ ಬೆಳಗಾವಿಯ ಪ್ರವಾಸಿ ಮಂದಿರದ ಆವರಣದಲ್ಲಿ ಬೀದಿನಾಯಿಗಳ ಹಿಂಡು ಪ್ರತ್ಯಕ್ಷವಾಗಿ ಕರ್ತವ್ಯ ನಿರತ ಅಧಿಕಾರಿಗಳನ್ನು ಸುಸ್ತಾಗಿಸಿದ್ದು, ಕೊನೆಗೂ ಡಾಗ್ ಕ್ಯಾಚರ್ಸ್ ನೆರವಿನಿಂದ ನಾಯಿಗಳನ್ನು ಹಿಡಿದು ಸ್ಥಳಾಂತರಿಸಿದ ಘಟನೆ ನಡೆದಿದೆ.


ಪ್ರವಾಸಿ ಮಂದಿರದಲ್ಲಿ ಸಿಎಂ ಕ್ಯಾಂಪ್ ಮಾಡುತ್ತಿರುವ ಬೆನ್ನಲ್ಲೇ ಆವರಣದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಗಣ್ಯರು ಹಾಗೂ ಅಧಿಕಾರಿಗಳ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಇಬ್ಬರು ಪರಿಣಿತ ಡಾಗ್ ಕ್ಯಾಚರ್ಸ್‌ಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಅವರು ಕಾರ್ಯಾಚರಣೆ ನಡೆಸಿ ಕಿರಿಕ್ ಮಾಡುತ್ತಿದ್ದ ಶ್ವಾನಗಳನ್ನು ಬಲೆ ಬೀಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಹಿಡಿದ ಬೀದಿನಾಯಿಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಶ್ವಾನಗಳ ಆಪರೇಷನ್ ಸಕ್ಸಸ್ ಆದ ಬೆನ್ನಲ್ಲೇ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
