ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಲೈಟ್ ವೇಟ್ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕದಲ್ಲಿ ಕಬ್ಬಿಣದ ಯಂತ್ರ ಬಿದ್ದು, ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಐವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಧಾರವಾಡ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಕಬ್ಬಿಣದ ಯಂತ್ರ ಬಿದ್ದು ಒಟ್ಟು ಏಳು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ರಾಜುಕುಮಾರ್ ಎಂಬ ಕಾರ್ಮಿಕನ ಹೊಟ್ಟೆಗೆ ಕಬ್ಬಿಣದ ರಾಡ್ ಚುಚ್ಚಿದ್ದು, ರಮೇಶ್ ಮಾಂಥ ಎಂಬುವವರ ಕೈಗೆ ತೀವ್ರ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಐದು ಜನ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒಡೆತನದಲ್ಲಿದ್ದ ಈ ಕೈಗಾರಿಕೆಯನ್ನು ಸದ್ಯ ಅಸ್ಟ್ರಾಟೆಕ್ ಕಂಪನಿಯವರು ನಡೆಸುತ್ತಿದ್ದಾರೆ. ಇಲ್ಲಿ ಲೈಟ್ ವೇಟ್ ಸಿಮೆಂಟ್ ಬ್ಲಾಕ್‌ಗಳನ್ನು ತಯಾರಿಸಲಾಗುತ್ತಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
