ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಂಬಯಿ ಬೆಳವಣಿಗೆ ಬೆನ್ನಲ್ಲೇ ಬೆಳಗಾವಿಯ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದ ಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ತುರ್ತು ಉನ್ನತ ಮಟ್ಟದ ಸಭೆ ಕರೆಯುವ ಭರವಸೆ ನೀಡಿದ್ದಾರೆ.



ಮಹಾರಾಷ್ಟ್ರ ಸರ್ಕಾರದ ಗಡಿ ಕುತಂತ್ರಕ್ಕೆ ಸೆಡ್ಡು ಹೊಡೆಯಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಶೀಘ್ರವೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗುವುದೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಗುರುವಾರ ಸಂಜೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಭರವಸೆ ನೀಡಿದರು. ಮುಂಬಯಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಮಿತಿಯ ಸಭೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಬೆಳಗಾವಿಯ ಸಮಾನ ಮನಸ್ಕ 22 ಕನ್ನಡ ಪರ ಸಂಘಟನೆಗಳ 40ಕ್ಕೂ ಅಧಿಕ ಮುಖಂಡರು ಸಿಎಂಗೆ ಮನವಿ ಸಲ್ಲಿಸಿದರು. ಗಡಿವಿವಾದದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಹಿರಿಯ ಮುತ್ಸದ್ದಿ ರಾಜಕಾರಣಿ ಎಚ್.ಕೆ.ಪಾಟೀಲ, ರಾಜ್ಯ ಸರ್ಕಾರಕ್ಕೆ ಗೌರವ ಸಲಹೆಗಾರರಾಗಲು ಸಿದ್ಧರಿರುವ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಹಾಗೂ ಕಳೆದ 44 ವರ್ಷಗಳಿಂದ ಗಡಿ ಹೋರಾಟದಲ್ಲಿ ತೊಡಗಿರುವ ಹಿರಿಯ ಮುಖಂಡ ಅಶೋಕ ಚಂದರಗಿ ಅವರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸಲು ನಿರಾಕರಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಕನ್ನಡ ಮುಖಂಡರು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸಚಿವರಾದ ಎಚ್.ಕೆ.ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಗಡಿವಿವಾದದ ಇತ್ತೀಚಿನ ಸ್ಥಿತಿಗತಿಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.
