State

ರಾಜ್ಯದಲ್ಲಿ ಭೀಕರ ಬರ: ಜಲಾಶಯದ ನೀರು ಕೇವಲ ಕುಡಿಯಲು ಮಾತ್ರ ಮೀಸಲು!

Share

ಕುಡಿಯುವ ನೀರಿಗೆ ಆದ್ಯತೆ, ಜಲಾಶಯದ ನೀರು ಬೆಳೆಗೆ ಪೂರೈಕೆ ಆಗಬಾರದು: ಕಂದಾಯ ಸಚಿವ ಜಿ. ಪರಮೇಶ್ವರ್ಈ ಬಾರಿ ತೀವ್ರ ಬರಗಾಲ ಆವರಿಸಿರುವುದರಿಂದ ಜಲಾಶಯಗಳಲ್ಲಿರುವ ನೀರಿನಲ್ಲಿ ಮೊದಲ ಆದ್ಯತೆಯನ್ನು ಕುಡಿಯುವ ನೀರಿಗೆ ನೀಡಲಾಗುವುದು ಎಂದು ಡಿಸಿಎಂ ಪರಮೇಶ್ವರ್​ ಹೇಳಿದ್ದಾರೆ.ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಲಾಶಯದ ನೀರು ಬೆಳೆಗೆ ಪೂರೈಕೆ ಆಗಬಾರದು. ರಾಜ್ಯದಲ್ಲಿ ಬಹಳ ಗಂಭೀರವಾದ ಪರಿಸ್ಥಿತಿ ಇದೆ. ನೀವೆಲ್ಲರೂ ಈ ಬಗ್ಗೆ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಕಂದಾಯ ಸಚಿವ ಜಿ. ಪರಮೇಶ್ವರ್ ಸೂಚಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ‌‌.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ‘ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ, ಚಟುವಟಿಕೆ ಹಾಗೂ ಉದ್ಯೋಗ’ ವಿಷಯಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ‌ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಮಾತನಾಡಿ, ಕರ್ನಾಟಕದಲ್ಲಿ ಭೀಕರವಾದ ಬರಗಾಲ ಕಾಣುತ್ತಿದ್ದೇವೆ. ಎಲ್‌ ನಿನೋ ಬಂದಾಗಲೆಲ್ಲ ಸಮುದ್ರದಲ್ಲಿ 2 ಡಿಗ್ರಿ ಉಷ್ಣಾಂಶ ಹೆಚ್ಚಾಗುತ್ತದೆ. ರಾಜ್ಯದಲ್ಲಿಯೂ 4 ರಿಂದ 6 ಡಿಗ್ರಿ ತಾಪಮಾನ ಜಾಸ್ತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ. 68ರಷ್ಟು ಮಳೆ ಕೊರತೆಯಾಗಿರುವುದು ನೋಡಬಹುದು. ಕೆಲವು ಕಡೆ 48ರಷ್ಟು ಕೊರತೆಯಾಗಿದೆ. ಹೀಗಾಗಿ ಬಹುತೇಕ ತಾಲೂಕುಗಳಲ್ಲಿ ಬರದ ತೀವ್ರತೆ ನೋಡುತ್ತಿದ್ದೇವೆ ಎಂದು ಹೇಳಿದರು.

ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ಈ ಬಾರಿ ರಾಜ್ಯದ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಈ ತುಂಬು ಮಳೆಗಾಲದ ಅವಧಿಯಲ್ಲಿ ಸರಾಸರಿಗಿಂತ 4ರಿಂದ 6 ಡಿಗ್ರಿಗಳಷ್ಟು ಉಷ್ಣಾಂಶ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ 4 ಡಿಗ್ರಿಯವರೆಗೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಇಷ್ಟು ತಾಪಮಾನ ದಾಖಲಾದರೆ ಕೆರೆ, ಕಟ್ಟೆಗಳಲ್ಲಿನ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ನೀರು ಭೂಮಿಗೆ ಇಂಗುವ ಬದಲು ಆವಿಯಾದರೆ ಅಂತರ್ಜಲದ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದ 31 ಜಿಲ್ಲೆಗಳಲ್ಲೂ ಮಳೆ ಕಡಿಮೆಯಾಗಿದೆ. ಶೇ.9 ರಿಂದ ಶೇ.68 ರಷ್ಟು ಕೊರತೆ ಕಾಣಿಸಿಕೊಂಡಿದೆ. 26 ಜಿಲ್ಲೆಗಳಲ್ಲಿ ಮಳೆಯ ಅತೀವ ಅಭಾವವಿದೆ. 178 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. 158 ತಾಲೂಕುಗಳಲ್ಲಿ ಕೊರತೆಯಿದೆ. 20 ತಾಲೂಕುಗಳಲ್ಲಿ ತೀವ್ರ ಕೊರತೆಯಿದೆ. ಇಡೀ ರಾಜ್ಯದ ಚಿತ್ರಣವನ್ನೇ ಗಮನಿಸಿದರೂ ಸಹ ಜೂನ್ 1 ರಿಂದ ಜುಲೈ 17 ರವರೆಗೆ ಸರಾಸರಿ 346 ಮಿಲಿ ಮೀಟರ್​ ಮಳೆಯಾಗಬೇಕಾದ ಕಡೆ ಕೇವಲ 215 ಮಿ.ಮೀ ಮಾತ್ರ ಮಳೆಯಾಗಿದೆ. ರಾಜ್ಯವ್ಯಾಪಿ ಶೇ.37 ರಷ್ಟು ಮಳೆ ಕೊರತೆಯಾಗಿದೆ. ನದಿಗಳಿಗೆ ನೀರು ಪೂರೈಸುವ ಮಲೆನಾಡಿನಲ್ಲಿ ಶೇ.43 ರಷ್ಟು ಕೊರತೆಯಾಗಿದೆ. ಕರಾವಳಿಯಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.33, ದಕ್ಷಿಣ ಒಳನಾಡಿನಲ್ಲಿ ಶೇ.31 ಮಿ.ಮೀ ಕಡಿಮೆಯಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.ಅಂತರ್ಜಲ ಮಟ್ಟ 88 ತಾಲೂಕುಗಳಲ್ಲಿ -4ರಷ್ಟು ಕುಸಿದಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತೀರ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸಬಹುದು. ಕುಡಿಯಲು ನೀರು ಇಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಗ್ರಾಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌. ಶಾಸಕರುಗಳು ಹೊಸದಾಗಿ ಬೋರ್‌ವೆಲ್ ಕೊರೆಸುವಂತೆ ಮನವಿಗಳನ್ನು ನೀಡಿದ್ದಾರೆ. ಬರ ಪರಿಸ್ಥಿತಿಯನ್ನು ಸ್ವತಃ ಪರಿಶೀಲನೆ‌ ಮಾಡಲು ಸಿಎಂ ಅವರು ಬೆಳಗಾವಿ, ಕಲಬುರಗಿಗೆ ತೆರಳಿದ್ದರು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಲಾಶಯದ ನೀರು ಬೆಳೆಗೆ ಪೂರೈಕೆ ಆಗಬಾರದು. ಈ ಬಗ್ಗೆ ಸಿಎಂ ಅವರು ನಿರ್ದೇಶನ ಕೊಟ್ಟಿದ್ದಾರೆ. ಬಹಳ ಗಂಭೀರವಾದ ಪರಿಸ್ಥಿತಿ ಇದೆ. ನೀವೆಲ್ಲರೂ ಈ ಬಗ್ಗೆ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬೋರ್‌ವೆಲ್ ಹಾಕಿದರೆ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲ‌. ಬೋರ್‌ವೆಲ್ ಕೊರೆಸಿದವರಿಗೆ ಮೋಟಾರ್ ಪಂಪ್‌, ವಿದ್ಯುತ್ ಸಂಪರ್ಕವನ್ನು ಕೂಡಲೇ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ. ಇದೆ‌. ಇದೆಲ್ಲವನ್ನು ನಾವು ಸದ್ಬಳಕೆ ಮಾಡದೆ ಹೋದರೆ, ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಣವನ್ನು ಸಮರ್ಪಕವಾಗಿ ಬಳಸಬೇಕು ಎಂದು ಸಚಿವರು ನಿರ್ದೇಶಿಸಿದರು.ಜನರು ಬಳ್ಳಾರಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುಳೆ ಹೋಗುತ್ತಿದ್ದಾರೆ. ಜನರಿಗೆ ಉದ್ಯೋಗ ನೀಡಲು ವಿಬಿ ಜಿ ರಾಮ್‌ ಜಿ ಯೋಜನೆಯನ್ನು ತ್ವರಿತವಾಗಿ ಆರಂಭಿಸಬೇಕು. ವಿಜಯಪುರದಲ್ಲಿ 20 ಪಂಚಾಯತ್‌ಗಳಲ್ಲಿ ಮಾತ್ರ ಆರಂಭಿಸಿದ್ದಾರೆ. ಈ ಬಗ್ಗೆ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.

ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿ ವಿಬಿ ಜಿ ರಾಮ್ ಜಿ ಬಹುತೇಕ ಜಿಲ್ಲೆಗಳಲ್ಲಿ ಕೆಲಸ ಪ್ರಾರಂಭಿಸಿಲ್ಲ. ಸುಮಾರು 5,000 ಗ್ರಾಮ ಪಂಚಾಯತ್​ಗಳ ಪೈಕಿ, 2,443 ಪಂಚಾಯತ್​ಗಳಲ್ಲಿ ವಿಬಿ ಜಿ ರಾಮ್‌ ಜಿ ಕೆಲಸ ಪ್ರಾರಂಭಿಸಿಲ್ಲ. 75 ತಾಲೂಕುಗಳಲ್ಲಿ 4 ವಾರಗಳಿಂದ ಒಣ ಹವೆ ಮುಂದುವರೆದಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಹೆಚ್ಚು ಅನುಕೂಲವಾಗುತ್ತದೆ‌. ಗ್ರೌಂಡ್ ಟ್ರೂಥಿಂಗ್‌ ನಡೆಸಬೇಕು ಎಂದು ಹೇಳಿದರು.

ಮೆಕ್ಕೆಜೋಳ, ಕಬ್ಬು ಸೇರಿದಂತೆ ಮುಂತಾದ ಬೆಳೆಗಳಿಗೆ ಹೆಚ್ಚು ನೀರು ತೆಗೆದುಕೊಳ್ಳುತ್ತದೆ. ಅಂತಹ ಬೆಳೆಗಳನ್ನು ಬೆಳೆಯದಂತೆ ಕ್ರಮ ವಹಿಸಬೇಕು. ಜಾನುವಾರುಗಳಿಗೂ ತೊಂದರೆ ಆಗುತ್ತಿದೆ. ಮೇವು ನೆರೆ ರಾಜ್ಯಗಳಲ್ಲೂ ಸಿಗುತ್ತಿಲ್ಲ. ಅಲ್ಲಿಯೂ ಬರ ಪರಿಸ್ಥಿತಿ ಇದೆ. ಈ ಬಗ್ಗೆ ಪಶುಸಂಗೋಪನೆ ಇಲಾಖೆಯವರು ಗಮನಿಸಬೇಕು. ನೀರಿನ ಮೂಲ ಇರುವ ರೈತರಿಗೆ ಮೇವಿನ ಬೀಜ ವಿತರಿಸಬೇಕು. ಮೇವು ಬೆಳೆದ ರೈತರಿಂದ ಖರೀದಿಸಿ ಎಂದು ಡಿಸಿಎಂ ಪರಮೇಶ್ವರ್​ ತಿಳಿಸಿದರು.

ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೀವು ಸಹ ಹೆಚ್ಚು ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಬೇಕು. 2023ರಲ್ಲಿ ಎಲ್ಲ ಜಲಾಶಯಗಳಲ್ಲಿ ನೀರು ಇತ್ತು. ಹಾಗಾಗಿ ಬರ ಪರಿಸ್ಥಿತಿ ಅಷ್ಟಾಗಿ ಕಾಣಲಿಲ್ಲ‌. ಈ ಬಾರಿ ಜಲಾಶಯಗಳಲ್ಲಿ ನೀರು ಇಲ್ಲ‌. ಬೋರ್‌ವೆಲ್ ಕೊರೆಸಲು ಟಾಸ್ಕ್‌ಫೋರ್ಸ್‌ನಲ್ಲಿ ತೀರ್ಮಾನ ಮಾಡಬೇಕು. ಪ್ರತಿ ವಾರ ಟಾಸ್ಕ್‌ಫೋರ್ಸ್ ಸಭೆ ನಡೆಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ನಿಮ್ಮ ಮಾಹಿತಿಯ ಪ್ರಕಾರವೇ ಈವರೆಗೆ ಶೇ.86 ರಷ್ಟು ಬಿತ್ತನೆಯಾಗಬೇಕಾದ ಕಡೆ ಶೇ.52 ರಷ್ಟು ಬಿತ್ತನೆಯಾಗಿದೆ. ತೋಟಗಾರಿಕಾ ಬೆಳೆಗಳೂ ಅಷ್ಟೇ. 4.36 ಲಕ್ಷ ಹೆಕ್ಟೇರುಗಳಲ್ಲಿ ಬಿತ್ತನೆಯಾಗಬೇಕಾದ ಕಡೆ ಕೇವಲ 1.53 ಲಕ್ಷ ಹೆಕ್ಟೇರುಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಜಾನುವಾರುಗಳ ಮೇವಿನ ಬಗ್ಗೆಯೂ ಅಷ್ಟೆ. ಮೇವು ಖರೀದಿಸಲು ಸಾಧ್ಯವಾಗದಷ್ಟು ಪರಿಸ್ಥಿತಿ ಹದಗೆಡಬಹುದು. ಇಡೀ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಮೇವು ಸಿಗದೆ ಹೋಗಬಹುದು. ಯಾಕೆಂದರೆ ಎಲ್ಲ ಕಡೆಯೂ ಅಭಾವವಿದೆ. ಮೊದಲೆಲ್ಲ ಅಕ್ಕಪಕ್ಕದ ರಾಜ್ಯಗಳಿಂದ ಮೇವು ಖರೀದಿಸಿ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಿ ಗೋಶಾಲೆಗಳನ್ನು ತೆರೆಯಲಾಗುತ್ತಿತ್ತು. ಆದರೆ ಈ ವರ್ಷ ಅದೂ ಸಾಧ್ಯವಾಗದೆ ಹೋಗಬಹುದು ಎಂಬ ಆತಂಕ ನನ್ನದು. ಆದ್ದರಿಂದ ಯಾವ ಯಾವ ರೈತರು ಮೇವಿನ ಕಿಟ್‌ಗಳನ್ನು ಪಡೆದು ಮೇವು ಬೆಳೆಯಲು ಆಸಕ್ತಿ ತೋರಿಸುತ್ತಾರೊ ಅವರಿಗೆ ಪ್ರೋತ್ಸಾಹ ನೀಡಿ ಎಂದು ಸೂಚನೆ ನೀಡಿದರು.

Tags:

error: Content is protected !!