Belagavi

ರಾಕಸಕೊಪ್ಪ ಜಲಶಯ ಭರ್ತಿ: ಬೆಳಗಾವಿಗೆ ತಪ್ಪಿದ ಜಲಕಂಠಕ!

Share

“ಕಳೆದೊಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಗೆ ನಗರದ ಜನತೆಯ ಕುಡಿಯುವ ನೀರಿನ ಆಸರೆಯಾದ ರಾಕಸಕೊಪ್ಪ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ದಿನಗಳ ಹಿಂದೆಯಷ್ಟೇ ಜಲಕ್ಷಾಮದ ಭೀತಿಯಲ್ಲಿದ್ದ ಬೆಳಗಾವಿ ನಗರಕ್ಕೆ ಸದ್ಯ ವರುಣದೇವ ದೊಡ್ಡ ರಿಲೀಫ್ ನೀಡಿದ್ದಾನೆ.”

ಬೆಳಗಾವಿ ನಗರದಿಂದ ಸುಮಾರು 20 ರಿಂದ 25 ಕಿಲೋಮೀಟರ್ ದೂರದಲ್ಲಿರುವ ರಾಕಸಕೊಪ್ಪ ಜಲಾಶಯಕ್ಕೆ ಮುಂಗಾರು ಮಳೆ ಹೊಸ ಜೀವ ನೀಡಿದೆ. ಪ್ರಸಕ್ತ ಬೇಸಿಗೆಯಲ್ಲಿ ಮಳೆಯ ಅಭಾವದಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹವು ತೀವ್ರವಾಗಿ ಕುಸಿದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಡೆಡ್ ಸ್ಟೋರೇಜ್ ಬಳಸುವ ಭೀತಿ ಎದುರಾಗಿತ್ತು. ಆದರೆ ಕಳೆದ ಒಂದು ವಾರದಿಂದ ಜಲಾನಯನ ಪ್ರದೇಶ ಹಾಗೂ ತಿಲಾರಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಲಾಶಯಕ್ಕೆ ಸದ್ಯ ನಿರಂತರ ನೀರಿನ ಒಳಹರಿವು ಆರಂಭವಾಗಿದ್ದು, ಕೇವಲ ಏಳೇ ದಿನಗಳಲ್ಲಿ ಶೇಕಡಾ 30 ರಷ್ಟು ಜಲಾಶಯ ಭರ್ತಿಯಾಗಿದೆ.

ಒಟ್ಟು 28 ಅಡಿ ಎತ್ತರವಿರುವ ರಾಕಸಕೊಪ್ಪ ಜಲಾಶಯದಲ್ಲಿ ಪ್ರಸ್ತುತ 8 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಅರ್ಧ ಟಿಎಂಸಿ ಸಾಮರ್ಥ್ಯದ ಈ ಜಲಾಶಯಕ್ಕೆ ಇನ್ನು ಒಂದು ವಾರ ಇದೇ ರೀತಿ ಮಳೆ ಮುಂದುವರಿದರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆಯಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಸದ್ಯದ ನೀರಿನ ಲಭ್ಯತೆಯಿಂದಾಗಿ ಬೆಳಗಾವಿ ನಗರದ ಕುಡಿಯುವ ನೀರಿನ ಪೂರೈಕೆಯಲ್ಲಿ ಎದುರಾಗಿದ್ದ ತಕ್ಷಣದ ಆತಂಕ ದೂರವಾಗಿದ್ದು, ಎಂದಿನಂತೆ ಸುಗಮವಾಗಿ ನೀರು ಸರಬರಾಜು ಮಾಡಲು ಆಡಳಿತ ಮಂಡಳಿ ಸಜ್ಜಾಗಿದೆ.

Tags:

error: Content is protected !!