ಬೆಳಗಾವಿಯ ಗೋಕುಲ್ ನಗರದ ಆರನೇ ಕ್ರಾಸ್ನಲ್ಲಿ ಪ್ರತಿ ಬಾರಿ ಮಳೆಗಾಲದಲ್ಲೂ ಎದುರಾಗುವ ನಾಲೆಯ ನೀರು ನುಗ್ಗುವ ಸಮಸ್ಯೆಗೆ ಈ ಬಾರಿಯೂ ಮುಕ್ತಿ ಸಿಕ್ಕಿಲ್ಲ. ನಾಲೆ ಒಡೆದು ಇಡೀ ವಸತಿ ಪ್ರದೇಶ ಜಲಾವೃತವಾಗುತ್ತಿದ್ದು, ನಾಲೆಯ ನೀರನ್ನು ಬೇರೆಡೆಗೆ ತಿರುಗಿಸಿ ಶಾಶ್ವತ ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಸ್ಥಳೀಯರು ಮಹಾನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ.


ಬೆಳಗಾವಿಯ ಗೋಕುಲ್ ನಗರದ ಆರನೇ ಕ್ರಾಸ್ನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ನಾಲೆ ಒಡೆದು ಹೋಗಿರುವುದರಿಂದ ಮಳೆ ನೀರು ಮತ್ತು ಚರಂಡಿ ನೀರು ನೇರವಾಗಿ ಜನರ ಮನೆಗಳ ಮುಂದೆ ಹಾಗೂ ವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಇದರಿಂದ ಇಡೀ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ನಿವಾಸಿಗಳು ತಕ್ಷಣವೇ ನಗರಸೇವಕರಾದ ಗಿರೀಶ್ ದೊಂಗಡಿ ಹಾಗೂ ರಾಜು ಭಾತಕಾಂಡೆ ಅವರ ಗಮನಕ್ಕೆ ತಂದಿದ್ದಾರೆ. ನಾಲೆಯ ಹರಿವನ್ನು ಬೇರೆಡೆಗೆ ತಿರುಗಿಸಿ, ಬಡಾವಣೆಯಲ್ಲಿ ಸೂಕ್ತ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಮಹಾನಗರ ಪಾಲಿಕೆಗೆ ಕಟ್ಟುನಿಟ್ಟಿನ ಒತ್ತಾಯ ಹೇರಿದ್ದಾರೆ.

ಉಭಯ ನಗರಸೇವಕರು ತಕ್ಷಣವೇ ಮಧ್ಯಪ್ರವೇಶಿಸಿ ಮಹಾನಗರ ಪಾಲಿಕೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು, ಇಲ್ಲಿನ ನಾಲೆ ಹಾಗೂ ಚರಂಡಿಗಳನ್ನು ಯುದ್ಧೋಪಾದಿಯಲ್ಲಿ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ. ಇದರೊಂದಿಗೆ, ಕೇವಲ ಅಧಿಕಾರಿಗಳನ್ನು ದೂಷಿಸುವುದಷ್ಟೇ ಅಲ್ಲದೆ ಸಾರ್ವಜನಿಕರಲ್ಲೂ ಸ್ವಚ್ಛತೆಯ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ನಗರಸೇವಕರು ಅನೇಕರು ಚರಂಡಿ ಹಾಗೂ ನಾಲೆಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಕಸದ ಕಡ್ಡಿಗಳನ್ನು ಎಸೆಯುತ್ತಿರುವುದರಿಂದ ನೀರು ಸರಾಗವಾಗಿ ಹರಿಯದೆ ಬ್ಲಾಕ್ ಆಗುತ್ತಿದೆ. ಹೀಗಾಗಿ ಚರಂಡಿಯಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸಿ, ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಬಡಾವಣೆಯ ಸ್ವಚ್ಛತೆ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
