ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಹೊಲದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಪ್ರಗತಿಪರ ರೈತರೊಬ್ಬರು ಅಸಹಾಯಕರಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ನಿವಾಸಿ, ಪ್ರಗತಿಪರ ರೈತ ಮಲ್ಲಯ್ಯ ದುಂಡಯ್ಯ ಹಿರೇಮಠ (52) ಎಂಬುವವರು ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಮ್ಮ ಹೊಲಕ್ಕೆ ತೆರಳಿದ್ದಾಗ ಕೃಷಿ ಹೊಂಡದ ಬಳಿ ಬೆಳೆದಿದ್ದ ಕಸ ತೆಗೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬದಲ್ಲಿ ಪತ್ನಿ ಭಾರತಿ, ಬಿ.ಎಸ್.ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಮಗಳು ಐಶ್ವರ್ಯಾ ಹಾಗೂ ಡಿಪ್ಲೋಮಾ ಓದುತ್ತಿರುವ ಮಗ ಅಕ್ಷಯ್ ಇದ್ದು, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದ ಮನೆಯ ಯಜಮಾನನನ್ನೇ ಕಳೆದುಕೊಂಡು ಈಗ ಸಂಪೂರ್ಣವಾಗಿ ಅನಾಥವಾಗಿದೆ. ಸರ್ಕಾರಿ ಬ್ಯಾಂಕ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ಬೆಳೆ ಸಾಲ ಹೊಂದಿದ್ದ ಮಲ್ಲಯ್ಯ ಅವರ ಆಕಸ್ಮಿಕ ಅಗಲಿಕೆ ಕುಟುಂಬವನ್ನು ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ದೂಡಿದೆ. ಘಟನಾ ಸ್ಥಳಕ್ಕೆ ನಂದಗಡ ಪೊಲೀಸ್ ಠಾಣೆಯ ಪಿ.ಐ ರವಿಕುಮಾರ್ ಧರ್ಮಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
