ಸಮಾಜಕ್ಕೆ ಒಳ್ಳೆಯದು ಆಗಬೇಕಾದರೆ ಹಲವರ ತ್ಯಾಗ ಮತ್ತು ಬಲಿದಾನ ಅಗತ್ಯ ಎಂಬುದನ್ನು ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ. ಅವರ ತ್ಯಾಗದ ಸಂದೇಶವನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್ ಹೇಳಿದರು.


ನಗರದ ಜಕಣಿಬಾವಿ ರಸ್ತೆಯಲ್ಲಿನ ಹುತಾತ್ಮರ ವರ್ತುಲದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಣೆ ಮಾಡಿ, ಮಾತನಾಡಿದರು. 1921ರ ಜುಲೈ 1 ರಂದು ಸಾರಾಯಿ (ಮದ್ಯ) ಮಾರಾಟ ನಿಷೇಧಕ್ಕೆ ಆಗ್ರಹಿಸಿ ನಡೆದ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಭಾಗವಹಿಸಿದ್ದ ಮಲ್ಲಿಕ ಸಾಬ್ ಬಿನ ಮರ್ದಾನಸಾಬ್, ಗೌಸುಸಾಬ್ ಬಿನ ಖಾದರ ಸಾಬ್ ಹಾಗೂ ಅಬ್ದುಲ್ ಗಫಾರ ಚೌಕತಾಯಿ ಅವರು ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದರು. ಸಮಾಜದ ಒಳಿತಿಗಾಗಿ ಶ್ರಮಿಸಿ, ತಮ್ಮ ಜೀವವನ್ನೇ ತ್ಯಾಗ ಮಾಡಿದ ಈ ಮೂವರು ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜದ ಹಿತಕ್ಕಾಗಿ ಹೋರಾಡಿದ ಈ ಮಹನೀಯರು ತಮ್ಮ ವೈಯಕ್ತಿಕ ಬದುಕಿಗಿಂತ ಜನರ ಒಳಿತನ್ನೇ ಮುಖ್ಯವೆಂದು ಪರಿಗಣಿಸಿ ಹೋರಾಟ ನಡೆಸಿದರು. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಅನೇಕ ಜನರ ತ್ಯಾಗ ಮತ್ತು ಬಲಿದಾನ ಅಗತ್ಯವಾಗುತ್ತದೆ ಎಂಬುದನ್ನು ಅವರ ಜೀವನವೇ ನಮಗೆ ತಿಳಿಸಿಕೊಡುತ್ತದೆ. ಸಮಾಜದ ಹಿತಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಕಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಶಂಕರ ಹಲಗತ್ತಿ, ಪ್ರದಾನ ಕಾರ್ಯದರ್ಶಿ ರವೀಂದ್ರ ಆಕಳವಾಡಿ, ಧಾರವಾಡ ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ಸಂಗಮೇಶ್ವರಯ್ಯಾ ಲಿಂಬೆಣ್ಣದೇವರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
