ಉದ್ಯಮಗಳ ಪ್ರಗತಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಅತ್ಯಗತ್ಯ. ಹೀಗಾಗಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳಿಂದ ಉದ್ಯಮಿಗಳಿಗೆ ತೊಂದರೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ಬೆಳಗಾವಿ ತಾಲೂಕಿನ ಕೈಗಾರಿಕಾ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಜುಲೈ 16ರಂದು ಸಂಜೆ 4 ಗಂಟೆಗೆ ಬೆಳಗಾವಿಯ ನೆಹರು ನಗರದಲ್ಲಿರುವ ಹೆಸ್ಕಾಂ (HESCOM) ಕಚೇರಿಯ ಸಭಾಂಗಣದಲ್ಲಿ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು.
ಬೆಳಗಾವಿ ಉದ್ಯಮ ಬಾಗಲಕೋಟೆ ರಸ್ತೆಯ ಹೆಸ್ಕಾಂ (HESCOM) ಸಭೆಯಲ್ಲಿ ಮಾತನಾಡಿದ ಪ್ರಮುಖ ಉದ್ಯಮಿಗಳು, ಕೈಗಾರಿಕಾ ಪ್ರದೇಶಗಳಲ್ಲಿ ಉಂಟಾಗುತ್ತಿರುವ ನಿರಂತರ ವೋಲ್ಟೇಜ್ ಏರುಪೇರುಗಳನ್ನು ತಡೆಗಟ್ಟಲು ಸ್ಟಾರ್ ರೇಟೆಡ್ ಪರಿವರ್ತಕಗಳು (Star-rated Transformers) ಮತ್ತು ಓ.ಎಲ್.ಟಿ.ಸಿ (OLTC) ವ್ಯವಸ್ಥೆಯನ್ನು ಅಳವಡಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಇದೇ ವೇಳೆ, ಹೆಸ್ಕಾಂ ಉಪಕೇಂದ್ರದಿಂದ ನಾವಗೇ (Navge) ಭಾಗದವರೆಗಿನ ಮಾರ್ಗ ಮಧ್ಯೆ ಇರುವ ಅಪಾಯಕಾರಿ ಅಕೇಶಿಯಾ ಮರಗಳು ಸಣ್ಣ ಗಾಳಿ ಬಂದರೂ ವಿದ್ಯುತ್ ತಂತಿಗಳ ಮೇಲೆ ಬಿದ್ದು ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಅಳಿವಿನ ಅಂಚಿನಲ್ಲಿರುವ ನೇಕಾರಿಕಾ ವೃತ್ತಿಯನ್ನು ನಂಬಿ ನೂರಾರು ಕುಟುಂಬಗಳು ದಶಕಗಳಿಂದ ಜೀವನ ಸಾಗಿಸುತ್ತಿದ್ದು, ಸದ್ಯ ನೇಕಾರರಿಗೆ ನೀಡುತ್ತಿರುವ ವಿದ್ಯುತ್ ಸೌಲಭ್ಯವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಸ್ಥಳೀಯ ನೇಕಾರರ ಪ್ರತಿನಿಧಿಯೊಬ್ಬರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಸದ್ಯ ಎದುರಾಗುತ್ತಿರುವ ವಿದ್ಯುತ್ ವ್ಯತ್ಯಯಗಳನ್ನು ತಕ್ಷಣವೇ ನಿಲ್ಲಿಸಿ, ಉದ್ಯಮಿಗಳಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ (Quality Power Supply) ಮಾಡಬೇಕೆಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೆಪಿಟಿಸಿಎಲ್ (KPTCL) ಹಾಗೂ ಹೆಸ್ಕಾಂ (HESCOM) ಸಂಸ್ಥೆಗಳ ನಡುವೆ ಸೂಕ್ತ ಸಮನ್ವಯತೆ ಇರಬೇಕು ಮತ್ತು ಕೆಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ವಿಳಂಬವಿಲ್ಲದೆ ತಕ್ಷಣವೇ ಒದಗಿಸಲು ಹೆಸ್ಕಾಂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಅವರು ತಿಳಿಸಿದರು. ಇಲ್ಲಿ ಸೂಕ್ತ ವಿದ್ಯುತ್ ಮತ್ತು ಮೂಲಸೌಕರ್ಯ ಸಿಗದಿದ್ದರೆ ಸ್ಥಳೀಯ ಕೈಗಾರಿಕೆಗಳು ನೆರೆರಾಜ್ಯ ಮಹಾರಾಷ್ಟ್ರದ ಪುಣೆ ಸೇರಿದಂತೆ ಇತರೆಡೆಗೆ ವಲಸೆ ಹೋಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ತಾವೇ ಖುದ್ದಾಗಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಪುಣೆಯ ಹೂಡಿಕೆದಾರರನ್ನು ಇಲ್ಲಿಗೆ ಆಕರ್ಷಿಸಲು ಸಭೆ ನಡೆಸಿದ್ದನ್ನು ಸ್ಮರಿಸಿ, ಅಧಿಕಾರಿಗಳು ಉದ್ಯಮಿಗಳ ಸಮಸ್ಯೆಗಳನ್ನು ತಕ್ಷಣವೇ ಹರಿಸಬೇಕೆಂದು ತಾಕೀತು ಮಾಡಿದರು.
ಕೈಗಾರಿಕೆಗಳಿಗೆ ನಿರಂತರ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಯ ಅಗತ್ಯತೆಯನ್ನು ಸಂಸದ ಜಗದೀಶ್ ಶೆಟ್ಟರ್ ಬಲವಾಗಿ ಒತ್ತಿ ಹೇಳಿದ್ದಾರೆ. ಕೆಲವೇ ನಿಮಿಷಗಳ ವಿದ್ಯುತ್ ಕಡಿತವೂ ಉತ್ಪಾದನೆಯ ಮೇಲೆ ಭಾರಿ ಪರಿಣಾಮ ಬೀರುವುದರಿಂದ, ಹೆಸ್ಕಾಂ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಕೈಗಾರಿಕೆಗಳು ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಮತ್ತು ವಿದ್ಯುತ್ ಶುಲ್ಕ ಪಾವತಿಸುತ್ತಿರುವುದರಿಂದ, ಅವರ ಕುಂದುಕೊರತೆಗಳಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಸ್ಥಳೀಯ ಅಧಿಕಾರಿಗಳ ಹಂತದಲ್ಲೇ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಸೂಚಿಸಿದರು. ಯಾವುದೇ ಆಡಳಿತಾತ್ಮಕ ವಿಳಂಬಗಳಿದ್ದರೆ ತಾವೇ ಖುದ್ದಾಗಿ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಮಂತ್ರಿಗಳೊಂದಿಗೆ ಮಾತನಾಡಿ ಪರಿಹರಿಸಲು ಸಿದ್ಧರಾಗಿರುವುದಾಗಿ ಹೇಳಿದ ಶೆಟ್ಟರ್, ಕಳೆದ ಆರು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಭೂಸ್ವಾಧೀನದ ಸಮಸ್ಯೆಯನ್ನು ಇಂದಿನ ಸಭೆಯ ಮೂಲಕ ಯಶಸ್ವಿಯಾಗಿ ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
