Belagavi

ಬೆಳಗಾವಿಯಲ್ಲಿ ಮುಂದುವರಿದ ವರುಣನ ಆರ್ಭಟ

Share

ಕಳೆದ ಐದು ದಿನಗಳಿಂದ ಬೆಳಗಾವಿ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದ ವಿವಿಧ ಭಾಗಗಳಲ್ಲಿ ಅವಾಂತರಗಳು ಮುಂದುವರಿದಿವೆ. ಸೋಮವಾರ ಭಾಗ್ಯನಗರದ 3ನೇ ಕ್ರಾಸ್‌ನಲ್ಲಿ ಬೃಹತ್ ಗಾತ್ರದ ಮರ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.

ನಿರಂತರ ಮಳೆಯಿಂದ ಮರದ ಬೇರುಗಳು ಸಡಿಲಗೊಂಡಿದ್ದರಿಂದ ಏಕಾಏಕಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಕಾರಿನ ಮೇಲೆ ಉರುಳಿ ಬಿದ್ದಿದೆ. ಘಟನೆಯ ವೇಳೆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಾರಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಮರ ಬೀಳುವ ವೇಳೆ ಸಮೀಪದಲ್ಲಿದ್ದ ವಿದ್ಯುತ್ ಕಂಬಗಳೂ ನೆಲಕ್ಕುರುಳಿದ್ದು, ಭಾಗ್ಯನಗರ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮರ ತೆರವು ಕಾರ್ಯ ಆರಂಭಿಸಿದರು. ವಿದ್ಯುತ್ ತಂತಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ, ರಸ್ತೆ ಸಂಚಾರ ಸುಗಮಗೊಳಿಸುವ ಕೆಲಸ ನಡೆಸಲಾಯಿತು. ಸ್ಥಳೀಯರು ಸಹ ಅಧಿಕಾರಿಗಳೊಂದಿಗೆ ಸಹಕರಿಸಿದರು.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದಲ್ಲಿ ಮರಗಳು ಧರೆಗುರುಳುವುದು, ಮನೆಗಳಿಗೆ ಹಾನಿಯಾಗುವುದು ಹಾಗೂ ರಸ್ತೆಗಳಲ್ಲಿ ನೀರು ನಿಲ್ಲುವಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಘಟನೆ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!