ಗೋವಾ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸಂಕೇತ್ ಅರ್ಸೇಕರ್ ಅವರು ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮಕ್ಕೆ ಸೌಹಾರ್ದಯುತ ಭೇಟಿ ನೀಡಿದರು. ಆಶ್ರಮದ ಹಿರಿಯ ಜೀವಗಳ ಯೋಗಕ್ಷೇಮ ವಿಚಾರಿಸಿದ ಅವರು, ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಶುಭಸಂದೇಶವನ್ನು ಆಶ್ರಮದ ನಿವಾಸಿಗಳಿಗೆ ತಲುಪಿಸಿದರು.

ಬೆಳಗಾವಿಯ ಕಾವೇರಿ ನಗರದಲ್ಲಿರುವ ಶಾಂತಾಯಿ ವೃದ್ಧಾಶ್ರಮಕ್ಕೆ (ಸೆಕೆಂಡ್ ಚೈಲ್ಡ್ಹುಡ್) ಗೋವಾ ಮುಖ್ಯಮಂತ್ರಿಗಳ ಕಾರ್ಯದರ್ಶಿ ಶ್ರೀ ಸಂಕೇತ್ ಅರ್ಸೇಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಪರವಾಗಿ ಆಶ್ರಮದ ಹಿರಿಯ ನಾಗರಿಕರಿಗೆ ಹಾಗೂ ಆಡಳಿತ ಮಂಡಳಿಗೆ ಆತ್ಮೀಯ ಶುಭಾಶಯಗಳನ್ನು ಕೋರಿದರು. ಬೆಳಗಾವಿಯ ಮಾಜಿ ಮೇಯರ್ ಹಾಗೂ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಶ್ರೀ ವಿಜಯ ಮೋರೆ ಅವರು ಸಂಕೇತ್ ಅರ್ಸೇಕರ್ ಹಾಗೂ ಅವರ ನಿಯೋಗವನ್ನು ಶಾಲು ಹೊದಿಸಿ ಗೌರವಪೂರ್ವಕವಾಗಿ ಸ್ವಾಗತಿಸಿದರು.
ಆಶ್ರಮದಲ್ಲಿದ್ದ ವೃದ್ಧರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ನಿಯೋಗವು, ಅಲ್ಲಿ ನೀಡಲಾಗುತ್ತಿರುವ ಸೇವೆ ಮತ್ತು ಪೋಷಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿತು. ಈ ಭೇಟಿಯ ವೇಳೆಯಲ್ಲಿ ಸಾವರ್ಡೆ ಪಂಚಾಯತ್ ಸರಪಂಚ್ ಶಶಿಕಾಂತ್ ನಾಯಕ್, ಉತ್ತರ ಗೋವಾ ಯುವ ಉಪಾಧ್ಯಕ್ಷ ಗುಣಾಜಿ ಮಾಂದ್ರೇಕರ್, ಸಾಯೀಶ್ ನಾಯಕ್, ಗೌರೇಶ್ ರಾವತ್ ಹಾಗೂ ಸತೀಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಶಾಂತಾಯಿ ವೃದ್ಧಾಶ್ರಮ ಮಾಡುತ್ತಿರುವ ಸಾಮಾಜಿಕ ಸೇವೆ ಮತ್ತು ಹಿರಿಯರ ಆರೈಕೆ ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
