Uncategorized

ಜಮೀನಿನಲ್ಲಿ ರೆಂಟೆ-ಕುಂಟೆ ಹೊಡೆಯಲು ಸೈ… ಮನೆ ಕೆಲಸ ಮಾಡಲು ಕೂಡ ಸೈ… ಕೃಷಿಯಲ್ಲೂ ಮಿಂಚುತ್ತಿರುವ ಯುವ ಮಹಿಳಾ ರೈತರು

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಯುವ ಮಹಿಳಾ ರೈತರು ಕೃಷಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದ್ದಾರೆ. ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೆ ಜಮೀನಿನ ಅತ್ಯಂತ ಕಠಿಣ ಎನ್ನಲಾಗುವ ರೆಂಟೆ-ಕುಂಟೆ ಹೊಡೆಯುವ ಕೆಲಸವನ್ನು ಅತ್ಯಂತ ಸಲೀಸಾಗಿ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಯುವ ಮಹಿಳೆಯರು ಮನೆ ಮತ್ತು ಕೃಷಿ ಎರಡನ್ನೂ ಸಮರ್ಥವಾಗಿ ನಿಭಾಯಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮದುವೆಯಾದ ಬಳಿಕ ಕೇವಲ ನಾಲ್ಕು ಗೋಡೆಗಳ ಮಧ್ಯೆ ಮುದುಡಿ ಹೋಗದೆ, ತಮ್ಮ ಜಮೀನಿನಲ್ಲಿ ರೆಂಟೆ-ಕುಂಟೆ ಹೊಡೆಯುವುದು, ಬಿತ್ತನೆ ಮಾಡುವುದು ಹಾಗೂ ಕಳೆ ತೆಗೆಯುವುದು ಸೇರಿದಂತೆ ಪ್ರತಿಯೊಂದು ಕೃಷಿ ಚಟುವಟಿಕೆಯಲ್ಲಿಯೂ ಕುಟುಂಬದ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ. ಸ್ವಂತ ಜಮೀನಿನಲ್ಲಿ ಬೆವರು ಹರಿಸುತ್ತಾ ತಮ್ಮ ದೈಹಿಕ ಆರೋಗ್ಯವನ್ನೂ ಕಾಪಾಡಿಕೊಂಡಿರುವ ಈ ಯುವ ನಾರಿಯರು, ಕೃಷಿಯನ್ನು ಕೇವಲ ಕಾಯಕವನ್ನಾಗಿಸದೆ ಅದರಲ್ಲಿ ಯಶಸ್ಸು ಕಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇಂದಿನ ಯುವ ಪೀಳಿಗೆಗೆ ಕೃಷಿಯ ಮೇಲಿರುವ ಉದಾಸೀನತೆಯನ್ನು ಹೋಗಲಾಡಿಸಿ ಮಣ್ಣಿನ ಮಗಳಂದಿರಾಗಿ ಮಿಂಚುತ್ತಿರುವ ಈ ಧೀಮಂತ ಮಹಿಳೆಯರ ಸಾಧನೆ ಮತ್ತು ಅವರ ಕೃಷಿ ಅನುಭವದ ಮಾತುಗಳು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿವೆ.

Tags:

error: Content is protected !!