ಬಳ್ಳಾರಿಯಲ್ಲಿ ಮದುವೆ ರಿಸೆಪ್ಷನ್ ಮುಗಿದ ಕೆಲವೇ ಗಂಟೆಗಳಲ್ಲಿ ನವವಿವಾಹಿತ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ವಿವಾಹವಾಗಿದ್ದೇ ಈ ಭೀಕರ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಇಡೀ ನಗರವೇ ಬೆಚ್ಚಿಬಿದ್ದಿದೆ.

ಬಳ್ಳಾರಿ ನಗರದ ಬಟ್ಟಿ ಏರಿಯಾದ ಸಮತಾ ನಗರದಲ್ಲಿ ಗುರುವಾರ ತಡರಾತ್ರಿ ನಬಿ ರಸೂಲ್ ಎಂಬ ಯುವಕನನ್ನು ದುಷ್ಕರ್ಮಿಗಳು ಅತಿ ಅಮಾನುಷವಾಗಿ ಇರಿದು ಹತ್ಯೆ ಮಾಡಿದ್ದಾರೆ. 15 ದಿನಗಳ ಹಿಂದೆ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು ಪ್ರೀತಿಸಿ ಕರೆದೊಯ್ದಿದ್ದ ನಬಿ ರಸೂಲ್, ನಂತರ ಮರಳಿ ಬಂದು ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಗುರುವಾರ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ್ದನು. ಆದರೆ ರಿಸೆಪ್ಷನ್ ಮುಗಿದು ತಡರಾತ್ರಿ ಸುಮಾರು 11:30 ರ ವೇಳೆಗೆ ಸ್ನೇಹಿತನೊಬ್ಬ ಕರೆದಿದ್ದಾನೆ ಎಂದು ಮನೆಯಿಂದ ಹೊರಹೋದ ರಸೂಲ್ ಮತ್ತೆ ಮರಳಿ ಬರಲೇ ಇಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಡಿದಾಗ, ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ರಕ್ತದ ಮಡುವಿನಲ್ಲಿ ಆತನ ಶವ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತನ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದು ಅತ್ಯಂತ ಕ್ರೂರವಾಗಿ ಕೊಲೆ ಎಸಗಲಾಗಿದೆ. ಯುವತಿಯ ಮನೆಯವರ ವಿರೋಧದ ನಡುವೆಯೂ ನಡೆದ ಈ ಪ್ರೇಮ ವಿವಾಹವೇ ಕೊಲೆಗೆ ಪ್ರಮುಖ ಕಾರಣ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಯುವತಿಯ ಕಡೆಯ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನಗಳಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
