ವಾರಕರಿ ಭಕ್ತರ ಸಾಂಸ್ಕೃತಿಕ ಮತ್ತು ಭಕ್ತಿ ಸಂಭ್ರಮಕ್ಕೆ ಬೆಳಗಾವಿ ಸಜ್ಜಾಗಿದೆ. ವಾರಕರಿ ಮಹಾಸಂಘ ಬೆಳಗಾವಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಆಳಂದಿಯಿಂದ ಪಂಢರಪುರಕ್ಕೆ ಹಮ್ಮಿಕೊಳ್ಳಲಾಗುತ್ತಿರುವ ಭವ್ಯ ದಿಂಡಿ ಪಾದಯಾತ್ರೆಯು ಯಶಸ್ವಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಇಂದು ದಿಂಡಿಯೂ ಪಂಢರಪುರದತ್ತ ಪ್ರಯಾಣ ಬೆಳೆಸಿದೆ.


ವಾರಕರಿ ಮಹಾಸಂಘ ಬೆಳಗಾವಿ ವತಿಯಿಂದ ಆಳಂದಿಯಿಂದ ಪಂಢರಪುರಕ್ಕೆ ಹಮ್ಮಿಕೊಳ್ಳಲಾಗುತ್ತಿರುವ ದಿಂಡಿ ಪಾದಯಾತ್ರೆಯು ಈ ಬಾರಿ ಯಶಸ್ವಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ದಿವಂಗತ ಭಾವುಸಾಹೇಬ್ ಪಾಟೀಲ್ ಗುರೂಜಿ ಅವರ ದಿವ್ಯ ಮಾರ್ಗದರ್ಶನ ಹಾಗೂ ಕೃಪಾಶೀರ್ವಾದದಲ್ಲಿ ಕಳೆದ 31 ವರ್ಷಗಳಿಂದ ಈ ದಿಂಡಿ ಯಾತ್ರೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಇಂದು ಈ ದಿಂಡಿಯೂ ಬೆಳಗಾವಿಯಲ್ಲಿ ಪೂಜೆ ಸಲ್ಲಿಸಿ ಪಂಢರಪುರದತ್ತ ಪ್ರಯಾಣ ಬೆಳೆಸಿತು.

ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ವಾರಕರಿ ಭಕ್ತರನ್ನು ಒಗ್ಗೂಡಿಸಿ ಈ ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದ್ದು, ಮಾವುಲಿಗಳ ಪಾದಯಾತ್ರೆಯ ಬೆನ್ನಲ್ಲೇ ‘ದಿಂಡಿ ಕ್ರಮಾಂಕ 4’ ರ ಅಡಿಯಲ್ಲಿ ಬೆಳಗಾವಿ ಭಾಗದ ವಾರಕರಿಗಳು ಇದರಲ್ಲಿ ಭಕ್ತಿಯಿಂದ ಪಾಲ್ಗೊಳ್ಳಲಿದ್ದಾರೆ. ಮುಂಬರುವ ಜುಲೈ 8 ರಂದು ಆಳಂದಿಯ ಚಿಂಚಫಾಟಾದಿಂದ ಈ ಪ್ರಸ್ಥಾನ ಆರಂಭವಾಗಲಿದ್ದು, ಜುಲೈ 9 ರಂದು ಮುಂಜಾನೆ ಪುಣೆಯತ್ತ ಪಾದಯಾತ್ರೆ ಸಾಗಲಿದೆ.ಮಹಾಸಂಘದ ಪ್ರಮುಖರಾದ ಎಸ್.ಆರ್. ಪಾಟೀಲ್ ಅವರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸುಮಾರು 700 ರಿಂದ 800 ಭಕ್ತಾದಿಗಳಿಗೆ ದಿನದ ಮೂರೂ ಹೊತ್ತು ಉಚಿತ ಊಟೋಪಚಾರ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬಾಂಡಗಿ ಅವರು ವಾಹನ ಹಾಗೂ ಡೀಸೆಲ್ ವೆಚ್ಚಕ್ಕಾಗಿ ಭಕ್ತರಿಂದ ಕೇವಲ 1500 ರೂಪಾಯಿಗಳನ್ನು ಮಾತ್ರ ಪಡೆಯಲಾಗುತ್ತಿದ್ದು, ಪುಣೆ, ಬೆಳಗಾವಿ, ಚಂದಗಡ ಮತ್ತು ಕೊಲ್ಲಾಪುರ ಭಾಗದ ಹತ್ತಾರು ಉದಾರಿ ದಾನಿಗಳು ಹಾಗೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಸ್ವಯಂಸೇವಕರು ಹಗಲಿರುಳು ಭಕ್ತರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಭಗವಂತನ ಕೃಪೆಗೆ ಪಾತ್ರರಾಗಲು ವಾರಕರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮಹಾಸಂಘದ ವತಿಯಿಂದ ವಿನಂತಿಸಲಾಗಿದೆ. ಈ ಭಕ್ತಿ ಉತ್ಸವದ ಅಂಗವಾಗಿ, ವಾರಕರಿ ಮಹಾಸಂಘ ಬೆಳಗಾವಿಯ ದಿಂಡಿಯು ಸದ್ಯ ಮಹಾದ್ವಾರ ರೋಡ್‌ನಲ್ಲಿರುವ ಶ್ರೀ ಜ್ಞಾನೇಶ್ವರ ಮಾವುಲಿ ವಿಠ್ಠಲ ರುಕ್ಮಾಯಿ ಮಂದಿರದಿಂದ ಎರಡು ಟ್ರಕ್, ಎರಡು ಬೊಲೆರೊ ಗಾಡಿಗಳು ಹಾಗೂ ಒಂದು ಅಶೋಕ್ ಲೇಲ್ಯಾಂಡ್ ಹೌದಾ ಗಾಡಿ ಸೇರಿದಂತೆ ಒಟ್ಟು ಐದು ವಾಹನಗಳೊಂದಿಗೆ ಬೆಳಗಾವಿಯಿಂದ ಭರ್ಜರಿಯಾಗಿ ಹೊರಟಿದೆ ಎಂದರು.
ಈ ಸಂದರ್ಭದಲ್ಲಿ ಮಹಾಸಂಘದ ಪದಾಧಿಕಾರಿಗಳು ಮತ್ತು ಮುಖಂಡರಾದ ಎಸ್.ಆರ್. ಪಾಟೀಲ್, ಚಂದ್ರಕಾಂತ್ ಬಾಂಡಗಿ, ಶಂಕರ್ ಬಾಬಲಿ, ಪ್ರಭಾಕರ್ ಕಾಕಡೆ, ಶ್ರೀಧರ್ ಕಾಕಡೆ, ಅಶೋಕ್ ಹಾರಕಾರೆ ಸೇರಿದಂತೆ ಪ್ರಮುಖರು ಭಾಗಿಯಾಗಿದ್ಧರು.
