ಬೆಳಗಾವಿ ನಗರದಲ್ಲಿ ಚಾತುರ್ಮಾಸದ ಅಂಗವಾಗಿ ಜೈನ ಮುನಿಗಳ ಭವ್ಯ ಪುರಪ್ರವೇಶ ಕಾರ್ಯಕ್ರಮ ಜರುಗಿದೆ. ಅಪಾರ ಸಂಖ್ಯೆಯ ಶ್ರಾವಕ-ಶ್ರಾವಿಕೆಯರ ಸಮ್ಮುಖದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಮುನಿಗಳನ್ನು ಶ್ರದ್ಧಾ-ಭಕ್ತಿಯಿಂದ ಸ್ವಾಗತಿಸಲಾಯಿತು.


ಪವಿತ್ರ ಚಾತುರ್ಮಾಸದ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಜೈನ ಮುನಿಗಳ ಭವ್ಯ ಪುರಪ್ರವೇಶ ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಭಕ್ತಿಭಾವದಿಂದ ನೆರವೇರಿತು. ಪರಮ ಪೂಜ್ಯ ಶ್ರೀ ಗಚ್ಛಾಧಿಪತಿ ರಾಜೇಂದ್ರ ಸುರಿಶ್ವರಜೀ ಮುನಿ ಮಹಾರಾಜ್ ಅವರ ಆಜ್ಞಾಶೀಷ ಹಾಗೂ 451 ದೀಕ್ಷಾದಾನೇಶ್ವರಿ ಪರಮ ಪೂಜ್ಯ ಶ್ರೀ ಗುಣರತ್ನಸುರಿಶ್ವರಜೀ ಮುನಿ ಮಹಾರಾಜ್ ಅವರ ದಿವ್ಯಾಶೀರ್ವಾದದೊಂದಿಗೆ ಮುನಿಗಳಾದ ಶ್ರೀ ಪುಣ್ಯರತ್ನಸುರಿಶ್ವರಜೀ, ಶ್ರೀ ರಶ್ಮಿರತ್ನ ಸುರಿಶ್ವರಜೀ, ಶ್ರೀ ಅರ್ಹಮರತ್ನ ವಿಜಯಜೀ ಹಾಗೂ ಪಾವನ ಮಿಶ್ರಾ ಮುನಿಗಳಾದ ಶ್ರೀ ಗೌತಮರತ್ನ, ಶ್ರೀ ಸುಧರ್ಮರತ್ನ ಮತ್ತು ಶ್ರೀ ತ್ರಿಭುವನರತ್ನ ಮುನಿ ಮಹಾರಾಜರನ್ನು ನಗರಕ್ಕೆ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು. ಬೆಳಗಾವಿಯ ಪಾಂಗುಳ ಗಲ್ಲಿಯ ಮಾರವಾಡಿ ಸ್ಥಾಪಿತ ಶ್ರೀ ಚಂದ್ರಪ್ರಭ ಜೈನ ಶ್ವೇತಾಂಬರ್ ಟ್ರಸ್ಟ್ ವತಿಯಿಂದ ಈ ಧಾರ್ಮಿಕ ಮಹೋತ್ಸವಕ್ಕೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.

ನಗರದ ಪ್ರಮುಖ ಖಡೇಬಝಾರ್‌ನ ಸಂಯುಕ್ತ ಮಹಾರಾಷ್ಟ್ರ ಚೌಕ್‌ನಿಂದ ಆರಂಭಗೊಂಡ ಮುನಿಗಳ ಭವ್ಯ ಮಂಗಳ ಪ್ರವೇಶ ಮೆರವಣಿಗೆಯು ಇಡೀ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಜೈನ ಧರ್ಮದ ವಿವಿಧ ಜಯಘೋಷಗಳು, ಭಕ್ತಿಗೀತೆಗಳ ಗಾಯನ ಹಾಗೂ ಸಾಂಪ್ರದಾಯಿಕ ನೃತ್ಯಗಳೊಂದಿಗೆ ಸಾಗಿದ ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಸಂಚರಿಸಿ ಪಾಂಗುಳ ಗಲ್ಲಿಯನ್ನು ತಲುಪಿ ಸಮಾರೋಪಗೊಂಡಿತು.
ಚಾತುರ್ಮಾಸದ ಈ ಪವಿತ್ರ ಧಾರ್ಮಿಕ ನಡಿಗೆಯಲ್ಲಿ ಶ್ವೇತಾಂಬರ ಜೈನ ಸಮಾಜದ ಅಪಾರ ಸಂಖ್ಯೆಯ ಶ್ರಾವಕ ಮತ್ತು ಶ್ರಾವಿಕೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಮುನಿಗಳ ದರ್ಶನ ಪಡೆದು ಪುನೀತರಾದರು.

