bellari

ಬಳ್ಳಾರಿ: ವಿಜಯನಗರ ಕಾಲದ 631 ವರ್ಷ ಹಳೆಯ ಅಪರೂಪದ ಜೈನ ದಾನಶಾಸನ ಪತ್ತೆ!

Share

ಬಳ್ಳಾರಿ ನೆಲದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲುವ ಮತ್ತೊಂದು ಮಹತ್ವದ ಹೆಜ್ಜೆಗುರುತು ಅನಾವರಣಗೊಂಡಿದೆ. ಜಿಲ್ಲೆಯ ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಬರೋಬ್ಬರಿ 631 ವರ್ಷಗಳಷ್ಟು ಹಳೆಯದಾದ, ಅತ್ಯಂತ ಅಪರೂಪದ ಜೈನ ದಾನಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದ ರೈತನೊಬ್ಬನ ಹೊಲದಲ್ಲಿ ವಿಜಯನಗರ ವೈಭವವನ್ನು ಸಾರುವ ಅಮೂಲ್ಯ ಜೈನ ದಾನಶಾಸನವೊಂದು ಸಂಶೋಧನಾ ತಂಡಕ್ಕೆ ಸಿಕ್ಕಿದೆ. ಕ್ರಿ.ಶ. 1395ರ ವಿಜಯನಗರ ಸಾಮ್ರಾಜ್ಯದ ಎರಡನೇ ಹರಿಹರರಾಯರ ಕಾಲಕ್ಕೆ ಸೇರಿದ ಈ ಶಾಸನದಲ್ಲಿ, ಜೈನ ತೀರ್ಥಂಕರ ಕುಂಥುನಾಥರಿಗೆ ತೆರಿಗೆ ವಿನಾಯಿತಿಯೊಂದಿಗೆ ಭೂದಾನ ನೀಡಿದ ಮಹತ್ವದ ಇತಿಹಾಸ ದಾಖಲಾಗಿದೆ. ಸೂರ್ಯ, ಚಂದ್ರ ಹಾಗೂ ಜೀನಮೂರ್ತಿಯ ಶಿಲ್ಪ ಕೆತ್ತನೆಗಳನ್ನು ಒಳಗೊಂಡಿರುವ ಈ ಶಾಸನವು, ಅಂತಾಪುರ ಗ್ರಾಮವು ಅಂದಿನ ಕಾಲದ ಪ್ರಮುಖ ಜೈನ ಧಾರ್ಮಿಕ ಕೇಂದ್ರವಾಗಿತ್ತು ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ಇದರೊಂದಿಗೆ ಸಂಶೋಧಕರ ತಂಡವು ಇಲ್ಲಿ ಇನ್ನೆರಡು ಜೈನ ಶಾಸನಗಳನ್ನು ಸಹ ಗುರುತಿಸಿದ್ದು, ಈ ಐತಿಹಾಸಿಕ ಸ್ಮಾರಕಗಳನ್ನು ಸರ್ಕಾರ ಮತ್ತು ಪುರಾತತ್ವ ಇಲಾಖೆ ತಕ್ಷಣವೇ ಸಂರಕ್ಷಿಸಬೇಕು ಎಂದು ಮನವಿ ಮಾಡಿದೆ.

Tags:

error: Content is protected !!