State

ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ, ಮೈಸೂರಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ!

Share

ಬಹುಭಾಷಾ ಗಾಯಕಿ ಭಾರತದ ಗಾನ ಕೋಗಿಲೆ ಎಸ್. ಜಾನಕಿ ಅವರು ಕಳೆದ ರಾತ್ರಿ ನಿಧನರಾಗಿದ್ದು, ದೇಶದ ಸಂಗೀತ ಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಶನಿವಾರ ಸಂಜೆ ವೇಳೆಗೆ ಆಸ್ಪತ್ರೆಯಲ್ಲಿ ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ, ಹೃದಯ ಸ್ತಂಭನವಾಗಿ ಜಾನಕಿ ಕೊನೆಯುಸಿರೆಳೆದರು. ಭಾನುವಾರ ಬೆಳಿಗ್ಗೆಯಿಂದ ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯವರೆಗೂ ದರ್ಶನ ನಡೆಯಲಿದೆ.

ಭಾನುವಾರ ಸಂಜೆ ವೇಳೆಗೆ ಮೈಸೂರು ಎಚ್‌ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ನವೀನ್ ಫಾರಂ ಹೌಸ್‌ಗೆ ಮೃತದೇಹ ಕೊಂಡೊಯ್ಯಲಾಗುತ್ತದೆ. ಅಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇನ್ನೂ ಜಾನಕಿ ಅವರ ಪುತ್ರ ಮುರಳಿಕೃಷ್ಣ 2026 ಜನವರಿಯಲ್ಲಿ ಮೃತಪಟ್ಟಿದ್ದರು. ಪತಿಯು 1997 ರಲ್ಲಿಯೇ ತೀರಿ ಹೋಗಿದ್ದರು. ಹೀಗಾಗಿ, ಮೊಮ್ಮಗಳು (ಮಗನ ಮಗಳು) ಅಪ್ಪರಾ ಅವರು ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಅವರೇ ಚಿತೆಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಭಾರತೀಯ ಚಿತ್ರರಂಗದ ಅದ್ಭುತ ಕಂಠಸಿರಿ, ಎವರ್ಗ್ರೀನ್ ಗೀತೆಗಳ ಗಾಯಕಿ ಎಸ್.ಜಾನಕಿ ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಇದೀಗ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಾನಕಿ 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ಸಂಗೀತದ ಕಡೆಗೆ ಅಪಾರ ಒಲವು ಹೊಂದಿದ್ದ ಇವರು, ಶಾಸ್ತ್ರೀಯ ಸಂಗೀತಗಾರರಾದ ಪೈಡಿಸ್ವಾಮಿ ಅವರಿಂದ ಸಂಗೀತದ ಆರಂಭಿಕ ಪಾಠಗಳನ್ನು ಕಲಿತರು. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸಿನೊಂದಿಗೆ ಜಾನಕಿ ತಮ್ಮ 20ನೇ ವಯಸ್ಸಿನಲ್ಲೇ ಅಂದಿನ ಮದ್ರಾಸ್ (ಈಗಿನ ಚೆನ್ನೈ) ನಗರಕ್ಕೆ ಕಾಲಿಟ್ಟರು. ಅಲ್ಲಿಂದ ಆರಂಭವಾದ ಅವರ ಗಾಯನ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಿತು. ಎಸ್.ಜಾನಕಿ ಅವರ ಕಂಠಸಿರಿಗೆ ಯಾವುದೇ ಭಾಷೆಯ ಗಡಿ ಇರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಶಾ, ತುಳು, ಉರ್ದು, ಪಂಜಾಬಿ, ಬಂಗಾಳಿ ಹಾಗೂ ಕೊಂಕಣಿ, ವಿದೇಶಿ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಗೀತೆಗಳು ಹಾಡಿದ್ದಾರೆ. ಜಾನಕಿ ಅವರಿಗೆ ಹಿನ್ನೆಲೆ ಗಾಯಕಿ ವಿಭಾಗದಲ್ಲಿ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿಗಳು ಸಂದಿವೆ.

ಭಾರತೀಯ ಚಿತ್ರರಂಗದ ಅಪರೂಪದ ಗಾಯಕಿ, ‘ಗಾನಕೋಗಿಲೆ’ ಎಂದೇ ಪ್ರಸಿದ್ಧರಾಗಿದ್ದ ಜಾನಕಿ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಜಾನಕಿ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ಮೈಸೂರಿನ ಮೇಲಿನ ಅವರ ಪ್ರೀತಿ ಕೊನೆಯವರೆಗೂ ಇತ್ತು. ಅವರ ಮೊದಲ ಹಾಗೂ ಕೊನೆಯ ಹಾಡು ಮೈಸೂರಿನಲ್ಲೇ ಮೂಡಿಬಂದಿದ್ದು ವಿಶೇಷ. ಅವರ ಅಂತಿಮ ಇಚ್ಛೆಯಂತೆ ಮೈಸೂರಿನಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಅವರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಹಲವು ಗಣ್ಯರು, ಅಭಿಮಾನಿಗಳು ಜಾನಕಿ ಅಮ್ಮನವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Tags:

error: Content is protected !!