ಯಾವುದೇ ಪೊಲೀಸ್ ಅಧಿಕಾರಿಗಳು ಡೀಲ್ಗಳು ಹಾಗೂ ಅಪರಾಧಗಳಲ್ಲಿ ಭಾಗಿಯಾಗಬಾರದು. ಇಂತಹ ವಿಚಾರದಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಮನವಿ ಎಂದಾದರೂ ಭಾವಿಸಿ, ಸೂಚನೆ ಎಂದಾದರೂ ಭಾವಿಸಿ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.


ವಿಧಾನಸೌಧದ ಆವರಣದಲ್ಲಿ ಶನಿವಾರ ನಡೆದ ರಾಜ್ಯದ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್ಗಳು ಹಾಗೂ 75 ಬೊಲೆರೋ ವಾಹನಗಳ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು”ಪೊಲೀಸ್ ಇಲಾಖೆಗೆ ಹೊಸ ಶಕ್ತಿ ತುಂಬಲಾಗುತ್ತಿದೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಈ ಇಬ್ಬರಿಂದ ನಮ್ಮ ರಾಜ್ಯ ಹಾಗೂ ದೇಶ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ನಿಮಗೆ ಸರ್ಕಾರದ ಪರವಾಗಿ ಅಭಿನಂದನೆಗಳು. ಸಾಧನೆ ಸಾಮರ್ಥ್ಯಕ್ಕಿಂತ ನಿಮ್ಮ ಗುರಿ ನಿರ್ಧಾರ ಮಾಡಿದಾಗ ಜಯ ನಿಮ್ಮದಾಗಲಿದೆ” ಎಂದರು.”ಪೊಲೀಸರು ಒಂದು ವರ್ಷದಲ್ಲಿ 375 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 1,500 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಇಡೀ ದೇಶ ಕರ್ನಾಟಕವನ್ನು ಗಮನಿಸುತ್ತಿದೆ. ಡ್ರಗ್ಸ್ ಜಾಲವನ್ನು ಭೇದಿಸಿದ ತಂಡಕ್ಕೆ ಸರ್ಕಾರ 10 ಲಕ್ಷದ ನಗದು ಬಹುಮಾನ ನೀಡಲು ತೀರ್ಮಾನಿಸಿದೆ. ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಪ್ರತಿಯೊಬ್ಬ ನಾಗರಿಕನೂ ಇಲಾಖೆ ಮೇಲೆ ಗೌರವ ಇಟ್ಟುಕೊಳ್ಳುವಂತೆ ಕೆಲಸ ಮಾಡಬೇಕು. ನಿಮ್ಮ ಯಶಸ್ಸೇ ಸರ್ಕಾರದ ಯಶಸ್ಸು” ಎಂದು ತಿಳಿಸಿದರು. ನಮ್ಮ ಪೊಲೀಸ್ ಇಲಾಖೆ ದೇಶದಲ್ಲೇ ದಕ್ಷ ಇಲಾಖೆ ಎಂದು ಹೆಸರು ಪಡೆದಿದೆ. ಪೊಲೀಸ್ ಸಿಬ್ಬಂದಿಗಳ ಪರಿಶ್ರಮ, ನಿಷ್ಠೆ, ಕಾರ್ಯಕ್ಷಮತೆಯಿಂದ ಈ ಹೆಸರು ಬಂದಿದೆ. ಹಗಲು ರಾತ್ರಿ ನಿಮ್ಮ ಸೇವೆಗೆ ಸರ್ಕಾರ ನಿಮ್ಮ ಪರವಾಗಿ ನಿಲ್ಲಲಿದೆ. ಕೆಲವು ಸಂದರ್ಭದಲ್ಲಿ ಅನಾಹುತಗಳು ಆಗುತ್ತವೆ. ಅಂತಹ ಪರಿಸ್ಥಿತಿಯಲ್ಲೂ ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಆತ್ಮಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಲಾಗಿದೆ. ಕಾನೂನು ಕಾಯುತ್ತೀರಿ, ಸಮಾಜದ ಹಿತ ಕಾಪಾಡುತ್ತೀರಿ. ಅಪರಾಧಗಳಲ್ಲಿ ವಿವಿಧ ರೂಪಗಳಿವೆ. ತಂತ್ರಜ್ಞಾನ, ಎಐ ಬಂದ ಬಳಿಕ ಅಪರಾಧ ಪತ್ತೆಹಚ್ಚಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಗೂಂಡಾಗಿರಿ ತಡೆಗಟ್ಟಲು, ಎಲ್ಲ ಠಾಣೆಗಳಲ್ಲಿ ಪಡೆ ರಚಿಸಲು ನಿರ್ದೇಶನ ನೀಡಿದ್ದೇನೆ” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಜಿ. ಪರಮೇಶ್ವರ, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಪೊಲೀಸ್ ವರಿಷ್ಠಾಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ಧರು.

