ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯನ್ನು ‘ಬೃಹತ್ ಬೆಳಗಾವಿ ಮಹಾನಗರ ಪಾಲಿಕೆ’ಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಕರವೇ ಟಿ.ಎ. ನಾರಾಯಣಗೌಡ ಬಣದ ರಾಜ್ಯಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದ ನಿಯೋಗವು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಪ್ರಮುಖ ಮನವಿಗಳನ್ನು ಸಲ್ಲಿಸಿತು.

ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ನಗರವು ಸುಮಾರು 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಮೂಲಸೌಕರ್ಯಗಳ ವಿಸ್ತರಣೆಗಾಗಿ ‘ಬೃಹತ್ ಬೆಳಗಾವಿ ಮಹಾನಗರ ಪಾಲಿಕೆ’ ಸ್ಥಾಪನೆ ಅಗತ್ಯ ಎಂದು ಕರವೇ ಮನವರಿಕೆ ಮಾಡಿಕೊಟ್ಟಿತು. ಇದರ ಜೊತೆಗೆ, ನಾಡಿನ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಬೆಳವಾಡಿ ಮಲ್ಲಮ್ಮ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಲಾಯಿತು. ಇದೇ ವೇಳೆ ನಗರದಲ್ಲಿ ಶೇ.60ರಷ್ಟು ಕನ್ನಡ ನಾಮಫಲಕಗಳ ನಿಯಮ ಜಾರಿಗೆ ಶ್ರಮಿಸಿದ ಅಧಿಕಾರಿಗಳನ್ನು ಶ್ಲಾಘಿಸಿದ ಕರವೇ, ಸಾರ್ವಜನಿಕರಿಗೆ ಸಿಗದೆ ನಿರ್ಲಕ್ಷ್ಯ ವಹಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಕೀಲ್ ಅಹಮದ್ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರ ಗಮನಕ್ಕೆ ತಂದಿತು.
ಕರವೇ ನಿಯೋಗದ ಮನವಿಗೆ ನೇರವಾಗಿ ಸ್ಪಂದಿಸಿದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ, ಬೆಳಗಾವಿ ನಗರದ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು. ಪ್ರಸ್ತುತ 40 MLD ಸಾಮರ್ಥ್ಯದ ನೀರಿನ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಒಟ್ಟು 60 MLD ನೀರು ಲಭ್ಯವಾಗಲಿದೆ ಎಂದರು. ನಗರದಲ್ಲಿ 24×7 ನಿರಂತರ ನೀರು ಪೂರೈಕೆ ಯೋಜನೆ ಪೂರ್ಣಗೊಂಡ ನಂತರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಸಾರ್ವಜನಿಕರ ಕರೆಗಳಿಗೆ ಸ್ಪಂದಿಸದ ಮತ್ತು ಕಚೇರಿಯಲ್ಲಿ ಲಭ್ಯವಿರದ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟ ಭರವಸೆ ನೀಡಿದರು.
