Belagavi

ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಕೇಂದ್ರ ಸಚಿವ ಶ್ರೀನಿವಾಸ್ ವರ್ಮಾ ಚಾಲನೆ ಪಿಎಂ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದಲ್ಲಿ ಅಭಿವೃದ್ಧಿ ಪರ್ವ ₹250 ಕೋಟಿ ವೆಚ್ಚದ ಬೆಳಗಾವಿ ಏರ್‌ಪೋರ್ಟ್‌ನ ಹೊಸ ಟರ್ಮಿನಲ್ ಕಾರ್ಯ ಶೇ.90 ರಷ್ಟು ಪೂರ್ಣ

Share

ಪಿಎಂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳಿಂದಾಗಿ ದೇಶದ ಮೂಲಸೌಕರ್ಯಗಳು ವೇಗವಾಗಿ ಬದಲಾಗುತ್ತಿವೆ. ಇದೀಗ ಬೆಳಗಾವಿ ವಿಮಾನ ನಿಲ್ದಾಣದ ಬೃಹತ್ ವಿಸ್ತರಣಾ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದ್ದು, ಈ ಭಾಗದ ಆರ್ಥಿಕತೆಗೆ ಹೊಸ ದಿಕ್ಸೂಚಿ ಸಿಗಲಿದೆ ಎಂದು ಕೇಂದ್ರ ಸಚಿವ ಭೂಪತಿರಾಜು ಶ್ರೀನಿವಾಸ್ ವರ್ಮಾ ಅವರು ಹೇಳಿದರು.
ಬೆಳಗಾವಿ ನಗರದ ಮಹಾವೀರ ಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಅಭಿಯಾನ’ವನ್ನು ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವರಾದ ಭೂಪತಿರಾಜು ಶ್ರೀನಿವಾಸ್ ವರ್ಮಾ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವರಾದ ಭೂಪತಿರಾಜು ಶ್ರೀನಿವಾಸ್ ವರ್ಮಾ ಅವರು ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ನಮ್ಮ ರಸ್ತೆಗಳು, ವಿಮಾನ ನಿಲ್ದಾಣ ಹಾಗೂ ರೈಲ್ವೆ ಲೈನ್‌ಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದರು. ಪ್ರಸ್ತುತ ಎಂಟು ವಂದೇ ಭಾರತ್ ರೈಲುಗಳು ಬೆಂಗಳೂರಿನಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಇತ್ತೀಚೆಗೆ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲನ್ನು ಸಹ ಆರಂಭಿಸಲಾಗಿದೆ ಎಂದು ತಿಳಿಸಿದರು. ಬೆಳಗಾವಿ ವಿಮಾನ ನಿಲ್ದಾಣವನ್ನು ₹250 ಕೋಟಿ ವೆಚ್ಚದಲ್ಲಿ ದೊಡ್ಡದಾದ ಹೊಸ ಟರ್ಮಿನಲ್‌ನೊಂದಿಗೆ ವಿಸ್ತರಿಸಲಾಗುತ್ತಿದ್ದು, ಶೇಕಡಾ 90 ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ಹೊಸ ಟರ್ಮಿನಲ್ ಮುಗಿದ ನಂತರ ವರ್ಷಕ್ಕೆ ಸುಮಾರು 36 ಲಕ್ಷ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಲು ಅನುಕೂಲವಾಗಲಿದ್ದು, ಈ ಭಾಗದ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಜಗದೀಶ್ ಶೆಟ್ಟರ್ ಅವರು ಬೆಳಗಾವಿಯ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸುದೀರ್ಘ ಅವಧಿಯ ಆಡಳಿತದ ದಾಖಲೆಯನ್ನು ಮುರಿದು, ಮೋದಿ ಅವರು 4,399 ದಿನಗಳ ಕಾಲ ಯಶಸ್ವಿಯಾಗಿ ದೇಶ ಮುನ್ನಡೆಸುವ ಮೂಲಕ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಖಲೆ ಬರೆದಿದ್ದಾರೆ ಎಂದು ಅವರು ತಿಳಿಸಿದರು. ಪ್ರಧಾನಿಯವರ ಈ ಅಪೂರ್ವ ಸಾಧನೆಗೆ ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ನಿರಂತರ ಹಾರ್ಡ್‌ವರ್ಕ್ ಕಾರಣ ಎಂದು ಪ್ರಶಂಸಿಸಿದ ಶೆಟ್ಟರ್, ಬೆಳಗಾವಿ ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಬೃಹತ್ ಕೊಡುಗೆ ಹಾಗೂ ನೂರಾರು ಕೋಟಿ ರೂಪಾಯಿಗಳ ಅನುದಾನದ ವಿವರಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಮಾತನಾಡಿ 2014 ಕ್ಕಿಂತ ಮೊದಲು ವಾಟ್ಸಾಪ್ ಸಂದೇಶವನ್ನು ಡೌನ್‌ಲೋಡ್ ಮಾಡಲು ಕನಿಷ್ಠ 5 ನಿಮಿಷ ಬೇಕಾಗುತ್ತಿತ್ತು, ಆದರೆ ಇಂದು ಕೇವಲ 5 ಸೆಕೆಂಡುಗಳಲ್ಲಿ ಆಗುತ್ತಿದೆ. ಇದೇ ದೇಶದ ಡಿಜಿಟಲ್ ಪ್ರಗತಿ ಎಂದು ಶ್ಲಾಘಿಸಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸಲು ನಾವೆಲ್ಲರೂ ಕೈಜೋಡಿಸಬೇಕು ಎಂದರು.ಬೆಳಗಾವಿಯಲ್ಲಿ 1999 ರಿಂದಲೂ ಲೋಕಸಭಾ ಕ್ಷೇತ್ರವು ಭಾರತೀಯ ಜನತಾ ಪಾರ್ಟಿಯ ವಶದಲ್ಲಿದ್ದು, ಮುಂದಿನ 25 ವರ್ಷಗಳ ಕಾಲವೂ ಇದು ಜನರ ಆಶೀರ್ವಾದದಿಂದ ಬಿಜೆಪಿಯಲ್ಲೇ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರುಗಳಾದ ಗೀತಾ ಸುತಾರ್ ಹಾಗೂ ಗ್ರಾಮೀಣ ಅಧ್ಯಕ್ಷ ಸುಭಾಷ್ ಪಾಟೀಲ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಮಹಾಪೌರರಾದ ಪ್ರೀತಿ ಕಾಮಕರ್, ಉಪ ಮಹಾಪೌರರಾದ ಹಣಮಂತ ಕೊಂಗಾಲಿ, ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ, ಮಾಜಿ ಶಾಸಕರಾದ ಸಂಜಯ ಪಾಟಿಲ, ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ ಸೇರಿದಂತೆ ಮಹಾನಗರ ಪಾಲಿಕೆಯ ವಿವಿಧ ನಗರ ಸೇವಕರು, ಪಕ್ಷದ ಪ್ರಮುಖ ಪದಾಧಿಕಾರಿಗಳು, ಹಿರಿಯ ನಾಗರಿಕರು, ಚಿಂತಕರು ಹಾಗೂ ನೂರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Tags:

error: Content is protected !!