• ಇಂದು ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ
• ಮಧ್ಯಾಹ್ನ ನೆರವೇರಲಿದೆ ಭವ್ಯ ಪ್ರಮಾಣವಚನ ಕಾರ್ಯಕ್ರಮ
• ಡಿಕೆಶಿಗೆ ಸಾಥ್ ನೀಡಿದ ಜಿ. ಪರಮೇಶ್ವರ್
• ಸಿದ್ದರಾಮಯ್ಯ ನಿವಾಸಕ್ಕೆ ನಾಯಕರ ಜಂಟಿ ಭೇಟಿ
ಇಡೀ ರಾಜ್ಯವೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ಇಂದು ಮಧ್ಯಾಹ್ನ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೂ ಮುನ್ನ ಬೆಂಗಳೂರಿನಲ್ಲಿ ಅತ್ಯಂತ ಸುಂದರ ಸೌಹಾರ್ದಯುತ ರಾಜಕೀಯ ದೃಶ್ಯವೊಂದು ಕಂಡುಬಂದಿದೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರು, ಅದಕ್ಕೂ ಮುನ್ನ ಹಿರಿಯ ನಾಯಕ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಮಂತ್ರಿಸಿದರು. ಹಿರಿಯ ನಾಯಕ ಜಿ. ಪರಮೇಶ್ವರ್ ಅವರೊಂದಿಗೆ ಸಿದ್ದರಾಮಯ್ಯನವರ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್, ಅತ್ಯಂತ ನಗುನಗುತ್ತಲೇ ಸಿದ್ದರಾಮಯ್ಯನವರನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆದಿದೆ. ಉಭಯ ನಾಯಕರು ಅತ್ಯಂತ ಸೌಹಾರ್ದಯುತವಾಗಿ ಮಾತುಕತೆ ನಡೆಸಿದ್ದು, ಹೈಕಮಾಂಡ್ ನಿರ್ಧಾರದಂತೆ ಇಂದು ಮಧ್ಯಾಹ್ನವೇ ಡಿ.ಕೆ.ಶಿವಕುಮಾರ್ ಅವರು ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಗದ್ದುಗೆ ಏರಲಿದ್ದಾರೆ. ಈ ಭೇಟಿಯ ವೇಳೆ ಜಿ. ಪರಮೇಶ್ವರ್ ಅವರು ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಪೂರ್ಣ ಸಾಥ್ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.

