Belagavi

ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿ ಕಳ್ಳರ ಸರಣಿ ಹಾವಳಿ: ಸಿಸಿಟಿವಿಯಲ್ಲಿ ಕಳ್ಳನ ದೃಶ್ಯ ಸೆರೆ, ಪೊಲೀಸರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!

Share

ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ದಿನದಿಂದ ದಿನಕ್ಕೆ ಮನೆಗಳ್ಳರ ಹಾಗೂ ದರೋಡೆಕೋರರ ಹಾವಳಿ ಮಿತಿಮೀರಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿ ದಿನದೂಡುವಂತಾಗಿದೆ. ಬುಧವಾರ ರಾತ್ರಿ ಕೂಡ ಇಲ್ಲಿ ಮನೆಗಳ್ಳತನಕ್ಕೆ ಯತ್ನ ನಡೆದಿದ್ದು, ಕಳ್ಳನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಲೈವ್ ಆಗಿ ಸೆರೆಯಾಗಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಎಪಿಎಂಸಿ ಠಾಣಾ ಪೊಲೀಸರು ಮಾತ್ರ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕುಮಾರಸ್ವಾಮಿ ಲೇಔಟ್‌ನಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದ ಸರಣಿ ಕಳ್ಳತನ ಮತ್ತು ದರೋಡೆ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈಗಾಗಲೇ ಸುಮಾರು 4 ರಿಂದ 5 ಬಾರಿ ಕಳ್ಳತನಕ್ಕೆ ಯತ್ನಗಳು ನಡೆದಿರುವುದು ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಬುಧವಾರ ರಾತ್ರಿ ಮನೆಗಳ್ಳತನಕ್ಕೆ ಬಂದಿದ್ದ ಖದೀಮನೊಬ್ಬನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದು ನಿವಾಸಿಗಳ ನಿದ್ದೆ ಗೆಡಿಸಿದೆ. ರಾತ್ರಿ ವೇಳೆ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆಕೋರರು ಸಂಚರಿಸುತ್ತಿರುವುದರಿಂದ, ಯಾವುದೇ ದೊಡ್ಡ ಅನಾಹುತ ಅಥವಾ ಪ್ರಾಣಹಾನಿ ಸಂಭವಿಸುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಭಾಗದಲ್ಲಿ ಕಳ್ಳರ ಕಾಟ ಹೆಚ್ಚಾಗಿರುವ ಕುರಿತು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರೂ, ಇಲಾಖೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ. ದೂರು ನೀಡಲು ಹೋದರೆ, “ನಿಮ್ಮ ಜವಾಬ್ದಾರಿಯನ್ನು ನೀವೇ ನೋಡಿಕೊಳ್ಳಿ” ಎಂಬ ಬೇಜವಾಬ್ದಾರಿಯ ಉತ್ತರ ಪೊಲೀಸರಿಂದ ಬರುತ್ತಿದೆ ಎಂದು ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲಾಖೆಯು ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ರಾತ್ರಿ ವೇಳೆ ಯಾವುದೇ ಬೀಟ್ ಪೊಲೀಸರು ಇಲ್ಲಿ ಗಸ್ತು ತಿರುಗುತ್ತಿರುವುದು ಕಂಡುಬರುತ್ತಿಲ್ಲ. ವಿಶೇಷವಾಗಿ ಲೇಔಟ್‌ನ ಕೊನೆಯ ಭಾಗದಲ್ಲಿರುವ ಮನೆಗಳಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದ್ದು, ಮಹಿಳೆಯರು ಮನೆಯಿಂದ ಹೊರಬರಲು ಹಾಗೂ ರಾತ್ರಿ ನೆಮ್ಮದಿಯಿಂದ ನಿದ್ರಿಸಲು ಭಯಪಡುವಂತಾಗಿದೆ. ಹೀಗಾಗಿ ತಕ್ಷಣವೇ ರಾತ್ರಿ ಗಸ್ತು (ನೈಟ್ ಬೀಟ್) ಹೆಚ್ಚಿಸಿ ತಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

“ನಮ್ಮ ಓಣಿಯಲ್ಲಿ ಸರಣಿ ಕಳ್ಳತನದ ಯತ್ನಗಳು ನಡೆಯುತ್ತಿರುವುದರಿಂದ ನಮಗೆ ತೀವ್ರ ಹೆದರಿಕೆ ಉಂಟಾಗಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಹಾಗೂ ನಿದ್ರಿಸಲು ಭಯಪಡುವಂತಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸಹ, ‘ನಿಮ್ಮ ಜವಾಬ್ದಾರಿಯನ್ನು ನೀವೇ ನೋಡಿಕೊಳ್ಳಿ’ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಕೊನೆಯ ಭಾಗದಲ್ಲಿರುವ ನಮ್ಮ ಮನೆಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಇಲಾಖೆಯು ರಾತ್ರಿ ವೇಳೆ ಗಸ್ತು ತಿರುಗುವ ಮೂಲಕ ನಮಗೆ ಸೂಕ್ತ ಸುರಕ್ಷತೆ ಒದಗಿಸಬೇಕು.

“ಕಳೆದ ಎರಡು ತಿಂಗಳಲ್ಲಿ ಈ ಭಾಗದಲ್ಲಿ ಸುಮಾರು 4ರಿಂದ 5 ಬಾರಿ ದರೋಡೆಕೋರರು ಬಂದು ಹೋಗಿದ್ದಾರೆ. ಒಮ್ಮೆ ನಮ್ಮ ಮನೆಯಲ್ಲೇ ದರೋಡೆ ನಡೆದಿದ್ದರೂ ಇದುವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯು ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಹೇಳುತ್ತಿದ್ದರೂ, ರಾತ್ರಿ ವೇಳೆ ಯಾವುದೇ ಬೀಟ್ ಪೊಲೀಸರು ಇಲ್ಲಿ ಗಸ್ತು ತಿರುಗುತ್ತಿರುವುದು ನಮಗೆ ಕಂಡುಬರುತ್ತಿಲ್ಲ. ಈ ಸರಣಿ ದರೋಡೆ ಯತ್ನಗಳಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

Tags:

error: Content is protected !!