Belagavi

ಬೆಳಗಾವಿಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ರ್ಯಾಲಿಗೆ ಚಾಲನೆ:

Share

ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿಂದು ಬೃಹತ್ ಜಾಗೃತಿ ರ್ಯಾಲಿ ಯನ್ನು ಹಮ್ಮಿಕೊಳ್ಳಲಾಗಿತ್ತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಬೆಳಗಾವಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಕೆಎಲ್‌ಇ ಸಂಸ್ಥೆ ಹಾಗೂ ಜಿತೋ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ರ್ಯಾಲಿಗೆ ಡಿಸಿಪಿ ನಾರಾಯಣ್ ಬರಮನಿ ಅವರು ಚಾಲನೆ ನೀಡಿದರು.

ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಿಂದ ಆರಂಭವಾದ ಈ ಬೃಹತ್ ಜಾಗೃತಿ ರಾಲಿಯು ಪ್ರಮುಖ ರಸ್ತೆಗಳ ಮೂಲಕ ಸಾಗಿ ಕೆಎಲ್‌ಇ ಸೆಂಟಿನರಿ ಕನ್ವೆನ್ಷನ್ ಸೆಂಟರ್ ತಲುಪಿತು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವಿವಿಧ ಫಾರ್ಮಸಿ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಔಷಧ ವ್ಯಾಪಾರಿಗಳು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ನಾರಾಯಣ ಕುಲಕರ್ಣಿ, ಸಂಜಯ್ ಕುಲಕರ್ಣಿ ಹಾಗೂ ಬಿಡಿಆರ್‌ಪಿಎ ಅಧ್ಯಕ್ಷರಾದ ಬಿ. ಬಿ. ಸದಲಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿಸಿಪಿ ನಾರಾಯಣ್ ಬರಮನಿ ಅವರು, ಮಾದಕ ದ್ರವ್ಯಗಳು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯವನ್ನು ಮಾತ್ರವಲ್ಲದೆ, ಇಡೀ ಕುಟುಂಬ, ಸಮಾಜ ಮತ್ತು ದೇಶದ ಆರ್ಥಿಕತೆಯನ್ನೇ ನಾಶಪಡಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಸ್ತುತ ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ಇದರ ಮುಖ್ಯ ಬಲಿಪಶುಗಳಾಗುತ್ತಿದ್ದು, ಕೇವಲ ಕಾನೂನಿನಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ನಿರಂತರ ಜಾಗೃತಿ ಮೂಡಿಸುವ ಮೂಲಕ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಇನ್ನು ನಾರಾಯಣ ಕುಲಕರ್ಣಿ ಮತ್ತು ಸಂಜಯ್ ಕುಲಕರ್ಣಿ ಅವರು ಇಂದಿನ ಯುವ ಪೀಳಿಗೆಯು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಮತ್ತು ಅವರಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸಲು ಈ ದಿನಾಚರಣೆಯನ್ನು ಆಯೋಜಿಸಲಾಗಿದೆ. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ವಿರುದ್ಧ ಸಮಾಜದಲ್ಲಿ ಪ್ರತಿರೋಧ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ಔಷಧ ವ್ಯಾಪಾರಿಗಳೆಲ್ಲರೂ ಒಂದಾಗಿ ಈ ವಿಶೇಷ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಯುವಜನತೆ ಮಾದಕ ವಸ್ತುಗಳಿಗೆ ‘ಇಲ್ಲ’ ಎಂದು ಹೇಳಿ ಆರೋಗ್ಯಕರ ಭವಿಷ್ಯವನ್ನು ಆರಿಸಿಕೊಳ್ಳಬೇಕು.

Tags:

error: Content is protected !!