ರಾಜ್ಯದಲ್ಲಿ ಸುರಕ್ಷಿತ ಆಹಾರ ಧಾನ್ಯಗಳ ಸಂಗ್ರಹಣೆ ಹಾಗೂ ವಿತರಣೆಯಲ್ಲಿ ಭಾರತೀಯ ಆಹಾರ ನಿಗಮವು (ಎಫ್ಸಿಐ) ಅತ್ಯುತ್ತಮ ಸಾಧನೆ ಮಾಡಿದೆ. ಕಳೆದ ಐದು ವರ್ಷಗಳಿಂದ ಶೂನ್ಯ ಹಾನಿ ಕಾಯ್ದುಕೊಳ್ಳುವ ಮೂಲಕ ಗುಣಮಟ್ಟ ನಿರ್ವಹಣೆಯಲ್ಲಿ ಎಫ್ಸಿಐ ಹೊಸ ದಾಖಲೆ ಬರೆದಿದೆ ಎಂದು ರಾಜ್ಯ ಮಟ್ಟದ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.



ಬೆಳಗಾವಿಯ ಫೇರ್ಫೀಲ್ಡ್ ಮ್ಯಾರಿಯೋಟ್ ಹೋಟೆಲ್ನಲ್ಲಿ ನಡೆದ ಭಾರತೀಯ ಆಹಾರ ನಿಗಮದ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ 2025-26ನೇ ಸಾಲಿನ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ನಿರ್ವಹಿಸುತ್ತಿದ್ದರೂ ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಹಾನಿ ಅಥವಾ ಕೊರತೆ ದಾಖಲಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪಿಎಂ ಪೋಷಣ್ ಸೇರಿದಂತೆ ವಿವಿಧ ಯೋಜನೆಗಳಡಿ ರಾಜ್ಯದಲ್ಲಿ ಒಟ್ಟು 52.91 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ರಾಜ್ಯದ ಅಗತ್ಯತೆಗಾಗಿ ರೈಲ್ವೆ ಮೂಲಕ 54.54 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು ಗೋಧಿಯನ್ನು ಸುರಕ್ಷಿತವಾಗಿ ತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.


ಸಭೆಯ ಬಳಿಕ ಸಂಸದರು ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿರುವ ಎಫ್ಸಿಐ ಬೃಹತ್ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋದಾಮಿನಲ್ಲಿ ಕೈಗೊಳ್ಳಲಾಗಿರುವ ವೈಜ್ಞಾನಿಕ ಸಂಗ್ರಹಣೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಪ್ರಸ್ತುತ ರಾಜ್ಯದ 61 ಗೋದಾಮುಗಳ ಮೂಲಕ 10.68 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಲಾಗಿದ್ದು, ಪಿಪಿಪಿ ಮಾದರಿಯಲ್ಲಿ ಹೆಚ್ಚುವರಿಯಾಗಿ 2.45 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಎಫ್ಸಿಐ ಜನರಲ್ ಮ್ಯಾನೇಜರ್ ಬಿ. ಒ. ಮಹೇಶ್ವರಪ್ಪ, ಸಹಾಯಕ ಜನರಲ್ ಮ್ಯಾನೇಜರ್ ರಮೇಶ ನಾಯಕ, ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ್, ಸಲಹಾ ಸಮಿತಿ ಸದಸ್ಯರಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುನಿತಾ ಜಗದೀಶ್, ಶಂಕರಣ್ಣ ಮುನ್ನೋಳಿ, ಶಶಿಧರ ಮತ್ತು ಮಂಜುನಾಥ ಉಪಸ್ಥಿತರಿದ್ದರು.


