ಬೆಳಗಾವಿ ತಾಲೂಕಿನ ಬೋಕನೂರ ಗ್ರಾಮದ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿದ್ದ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಜೂಜಾಟಕ್ಕೆ ಬಳಸಿದ್ದ ನಗದು ಹಣ ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 15/06/2026 ರಂದು ಬೆಳಗಾವಿ ತಾಲೂಕಿನ ಬೋಕನೂರ ಗ್ರಾಮದ ಹದ್ದಿಯ ಸಾವಗಾಂವ ಕೆರೆಯ ದಂಡೆಯ ಮೇಲಿರುವ ಸಾರ್ವಜನಿಕ ಅರಣ್ಯ ಪ್ರದೇಶದ ಮುಕ್ತ ಜಾಗದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ‘ಅಂದರ್ ಬಾಹರ್’ ಜೂಜಾಟವಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಶ್ರೀ ನಾಗನಗೌಡ ಕಟ್ಟಿಮನಿಗೌಡ್ರ ಹಾಗೂ ಅವರ ಸಿಬ್ಬಂದಿಯವರು ಜಂಟಿಯಾಗಿ ದಿಢೀರ್ ದಾಳಿ ನಡೆಸಿದ್ದಾರೆ.

ದಾಳಿಯ ಸಮಯದಲ್ಲಿ ವಿಜಯ ಶ್ರೀನಿವಾಸ ನಾಯ್ಡು (54), ಏಕನಾಥ ಸದಾಶಿವ ಹಾವಳೆ (37), ಹರುನ ಮೆಹಬೂಬ ಮುಲ್ಲಾ (60), ಸ್ವಪ್ನಾಲ ಉಮಾಕಾಂತ ಹುಂದ್ರಿ (30), ಕಲ್ಲಪ್ಪಾ ತಮ್ಮಣ್ಣಾ ಅಷ್ಟೇಕರ (62), ಸುನಿಲ ಬಾಬು ಬುವಾ (43), ಬಾಳು ಸುಬ್ಬಣ್ಣ ನಾಯಕ (40) ಮತ್ತು ಅಜಯ ಮಧು ಮಾಂಡಳಿಕ (23) ಎಂಬ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಒಟ್ಟು 23,500 ರೂಪಾಯಿ ನಗದು ಹಣ ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರ.ಸಂ. 156/2026, ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.
