ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಗರದ ಪ್ರಮುಖ ರಸ್ತೆಯಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಆರ್‌ಸಿಬಿ ಕ್ರೇಜಿ ಅಭಿಮಾನಿಗಳು ನಡುರಾತ್ರಿಯಲ್ಲೂ ಪಟಾಕಿ ಸಿಡಿಸಿ, ಜೈಘೋಷ ಕೂಗಿ ವಿಜಯೋತ್ಸವ ಆಚರಿಸಿದ್ದಾರೆ.


ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಗೆಲುವಿನ ಸಿಹಿ ಉಣ್ಣುತ್ತಿದ್ದಂತೆ, ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಪಂದ್ಯ ಮುಗಿಯುತ್ತಿದ್ದಂತೆ ನಗರದ ವಿವಿಧ ಮೂಲೆಗಳಿಂದ ಆಗಮಿಸಿದ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ವೃತ್ತದಲ್ಲಿ ಜಮಾಯಿಸಿದರು. ಆರ್.ಸಿ.ಬಿ.. ಆರ್.ಸಿ.ಬಿ.. ಎಂದು ಗಂಟಲು ಹರಿಯುವಂತೆ ಜೈಘೋಷ ಕೂಗಿದ ಯುವಕರು, ಸಾಲು ಸಾಲು ಪಟಾಕಿಗಳನ್ನು ಸಿಡಿಸಿ ಧಮಾಕಾ ನಡೆಸಿದರು. ಇನ್ನು ವಿಜಯೋತ್ಸವದ ನಡುವೆ ಆರ್.ಸಿ.ಬಿ ತಂಡದ ಲೋಗೋ ಹಾಗೂ ಆಟಗಾರರ ಸ್ಟಿಕ್ಕರ್ ಅಂಟಿಸಿಕೊಂಡು ಬಂದಿದ್ದ ಕಾರೊಂದು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಜರ್ಸಿ ಧರಿಸಿ, ಕೈಯಲ್ಲಿ ಆರ್‌ಸಿಬಿ ಧ್ವಜ ಹಿಡಿದು ರಸ್ತೆಯುದ್ದಕ್ಕೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಅಭಿಮಾನಿಗಳ ದಂಡು ಹೆಚ್ಚಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಯಾವುದೇ ಸಂಚಾರ ದಟ್ಟಣೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಖಡಕ್ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿ, ವಿಜಯೋತ್ಸವ ಶಾಂತಿಯುತವಾಗಿ ನಡೆಯುವಂತೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಸುಗಮ ವ್ಯವಸ್ಥೆ ಕಲ್ಪಿಸಿದರು.
