ಬೆಳಗಾವಿ ಹೊನಗಾದಲ್ಲಿ ಫೀನಿಕ್ಸ್ ಸಾರ್ವಜನಿಕ ಶಾಲೆ ಹಾಗೂ ಫೀನಿಕ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಆಶ್ರಯದಲ್ಲಿ 28ನೇ ವರ್ಷದ ಸಂಸ್ಥಾಪನಾ ಸಪ್ತಾಹ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಮುರ್ತಿ್ ಹಾಗೂ ಹೆಣ್ಣುಮಕ್ಕಳ ಅಂತರಶಾಲಾ ಫುಟ್‌ಬಾಲ್ ಕ್ರೀಡಾಕೂಟಕ್ಕೆ ಮಂಗಳವಾರ ಅದ್ಧೂರಿ ಚಾಲನೆ ಸಿಕ್ಕಿದೆ. ವಿವಿಧ ಶಾಲೆಗಳ ಕ್ರೀಡಾಪಟುಗಳು ಸರಣಿ ಪಂದ್ಯಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾರೆ.
ಹೊನಗಾದ ಫೀನಿಕ್ಸ್ ಶಾಲಾ ಮೈದಾನದಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆರ್‌ಎಲ್‌ಎಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಜ್ಯೋತಿ ಕವಳೇಕರ್, ಫೀನಿಕ್ಸ್ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ನಿಶಾ ರಾಜೇಂದ್ರನ್, ಮತ್ತು ಕನಕ ಶಾಲೆಯ ಪ್ರಾಚಾರ್ಯರಾದ ಜಾಕಿರ್ ಹುಸೇನ್ ಲಷ್ಕರಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಣ್ಯರಾದ ಅರುಣ್ ಕಂಬ್ಳೆ, ಮಹಾಂತೇಶ್ ಗವಿ, ಡಾ. ಪ್ರಶಾಂತ್ ಹಾಗೂ ಶ್ರೀಮತಿ ಸರ್ಫುನ್ನಿಸಾ ಸುಬೇದಾರ್ ಅವರೂ ಸಹ ಭಾಗವಹಿಸಿದ್ದರು.

ಅತಿಥಿಗಳಿಗೆ ಪುಷ್ಪಗುಚ್ಛ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದ ನಂತರ ಧ್ವಜಾರೋಹಣ ನೆರವೇರಿಸಲಾಯಿತು. ಶಾಲೆಯ ಹೆಸರಾಂತ ಕ್ರೀಡಾಪಟುಗಳಾದ ಜಿಯಾ ಪುಜೇರಿ, ಅಮೃತಾ ಗವಿ, ಭೂಮಿಕಾ ಖೋತ್ ಮತ್ತು ಜಾನ್ವಿ ಮಲವಾಡ್ಕರ್ ಅವರು ಕ್ರೀಡಾಜ್ಯೋತಿಯನ್ನು ಮೈದಾನದ ಸುತ್ತಲೂ ಪ್ರದಕ್ಷಿಣೆ ಹಾಕಿ ಅತಿಥಿಗಳಿಗೆ ಹಸ್ತಾಂತರಿಸಿದರು. ಇದೇ ವೇಳೆ ಮಾತನಾಡಿದ ಡಾ. ಜ್ಯೋತಿ ಕವಳೇಕರ್, ವಿದ್ಯಾರ್ಥಿಗಳಿಗೆ ಆಟದ ಜೊತೆಗೆ ಪಾಠವೂ ಅಷ್ಟೇ ಮುಖ್ಯ ಎಂದು ಹೇಳಿ ಶುಭ ಹಾರೈಸಿದರು. ಕ್ರೀಡಾಪಟು ಭೂಮಿಕಾ ಖೋತ್ ಎಲ್ಲರಿಗೂ ಕ್ರೀಡಾ ಪ್ರಮಾಣ ವಚನ ಬೋಧಿಸಿದರೆ, ಅತಿಥಿಗಳು ಆಕಾಶಕ್ಕೆ ಪಾರಿವಾಳಗಳನ್ನು ಹಾರಿಸುವ ಮೂಲಕ ಸ್ಪರ್ಧೆಗಳಿಗೆ ಅಧಿಕೃತ ಚಾಲನೆ ನೀಡಿದರು.
ಶಿಕ್ಷಕಿಯರಾದ ಹೀನಾ ಮೊಕಾಶಿ, ಸಾಕ್ಷಿ ಕುಕಡೋಳಿ, ನಂದಿಕಾ ಟಿ.ಎಸ್. ಹಾಗೂ ಇಸ್ರಾ ಜಿನಾಬಡೆ ಕಾರ್ಯಕ್ರಮದ ನಿರೂಪಣೆ ಮಾಡಿದರು. ಉದ್ಘಾಟನೆ ಬೆನ್ನಲ್ಲೇ ನಡೆದ 17 ವರ್ಷದೊಳಗಿನ (U-17) ಬಾಲಕರ ಮೊದಲ ಪಂದ್ಯದಲ್ಲಿ ಹೆರವಾಡಕರ್ ಶಾಲೆ 4-1 ಗೋಲುಗಳ ಅಂತರದಿಂದ ಕ್ಯಾಂಟೋನ್ಮೆಂಟ್ ಶಾಲೆಯನ್ನು ಮಣಿಸಿ ಭರ್ಜರಿ ಜಯ ಸಾಧಿಸಿತು. U-17 ವಿಭಾಗದ ಇತರ ಪಂದ್ಯಗಳಲ್ಲಿ ಸೇಂಟ್ ಪಾಲ್ಸ್ ಶಾಲೆ 6-0 ಗೋಲುಗಳಿಂದ ಸಂತ್ ಮೀರಾ ಶಾಲೆಯನ್ನು ಹಾಗೂ ಇಸ್ಲಾಮಿಯಾ ಶಾಲೆ 7-1 ಗೋಲುಗಳಿಂದ ಅಂಗಡಿ ಶಾಲೆಯನ್ನು ಸುಲಭವಾಗಿ ಪರಾಭವಗೊಳಿಸಿದವು. ಮತ್ತೊಂದು ಪಂದ್ಯದಲ್ಲಿ ಜೈನ್ ಹೆರಿಟೇಜ್ ತಂಡವು ಕೆಎಲ್ಇ ಇಂಟರ್ನ್ಯಾಷನಲ್ ವಿರುದ್ಧ 2-0 ಗೋಲುಗಳ ಜಯ ದಾಖಲಿಸಿತು. ಇನ್ನು 14 ವರ್ಷದೊಳಗಿನ (U-14) ಬಾಲಕರ ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೇಂಟ್ ಪಾಲ್ಸ್ ತಂಡವು ಜೈನ್ ಹೆರಿಟೇಜ್ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿತು. ಇದೇ ವಿಭಾಗದ ಮತ್ತೊಂದು ಪಂದ್ಯದಲ್ಲಿ ಸೇಂಟ್ ಕ್ಸೇವಿಯರ್ಸ್ ಹಾಗೂ ಅಂಗಡಿ ಶಾಲೆ ನಡುವಿನ ಹಣಾಹಣಿ 0-0 ಗೋಲುಗಳಿಂದ ಸಮಬಲಗೊಂಡರೆ, ವಿದ್ಯಾನಿಕೇತನ ಮತ್ತು ಸಂತ್ ಮೀರಾ ಶಾಲೆಯ ನಡುವಿನ ಮೂರನೇ ಪಂದ್ಯವೂ ಸಹ ಯಾವುದೇ ಗೋಲುಗಳಿಲ್ಲದೆ (0-0) ಡ್ರಾನಲ್ಲಿ ಅಂತ್ಯಗೊಂಡಿತು.
