ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ರೈತನ ಜೀವನಾಧಾರವಾಗಿದ್ದ ಮೂಕಪ್ರಾಣಿಗಳು ದುರಂತ ಅಂತ್ಯ ಕಂಡಿವೆ. ಮೇಯಲು ಹೋದ ಸಂದರ್ಭದಲ್ಲಿ ಪಾಳು ಬಿದ್ದ ಬಾವಿಗೆ ಬಿದ್ದು ಎರಡು ಎತ್ತುಗಳು ಸಾವನ್ನಪ್ಪಿದ್ದು, ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.


ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಕಣ್ಣೀರು ತರಿಸುವ ಘಟನೆಯೊಂದು ನಡೆದಿದೆ. ಗ್ರಾಮದ ರೈತ ಸುರೇಶ ಸಿದ್ದಪ್ಪ ಜಂಬಗಿ ಎಂಬುವವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಎಂದಿನಂತೆ ಮೇಯಲು ಹೋದಾಗ, ಅಲ್ಲಿಯೇ ಇದ್ದ ಪಾಳು ಬಿದ್ದ ಬಾವಿಗೆ ಅಕಸ್ಮಾತ್ ಆಗಿ ಬಿದ್ದು ದಾರುಣವಾಗಿ ಸಾವನ್ನಪ್ಪಿವೆ. ವರ್ಷ ಪೂರ್ತಿ ಮನೆಯ ಮಕ್ಕಳಂತೆ ಸಾಕಿ ಸಲಹಿದ್ದ ಎತ್ತುಗಳನ್ನು ಕಳೆದುಕೊಂಡ ರೈತ ಕುಟುಂಬದ ಗೋಳಾಟ ಮುಗಿಲು ಮುಟ್ಟಿದ್ದು, ಮೃತ ಎತ್ತುಗಳ ಮೇಲೆ ಬಿದ್ದು ಮಹಿಳೆಯರು ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಈ ಹೃದಯವಿದ್ರಾವಕ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
