ವಿದ್ಯುತ್ ಸಂಪರ್ಕಕ್ಕಾಗಿ 2,400 ಚದರ ಅಡಿವರೆಗಿನ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾದ ಎಲ್ಲ ವಾಸದ ಮನೆಗಳಿಗೆ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ಮುಂಚೆ 31.5.2005ರೊಳಗೆ ಕಟ್ಟಿದ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ, ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಹಲವರು ಈ ವಿನಾಯಿತಿಯಿಂದ ಯಾವುದೇ ಅನುಕೂಲವಾಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ಹಾಗಾಗಿ 31.05.2005 ಕಟ್ ಆಫ್ ದಿನಾಂಕವನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಯಾವುದೇ ಹಳೆ ವಾಸದ ಮನೆಗಳ ನಿರ್ಮಾಣ ಪೂರ್ಣವಾಗಿ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಈಗಾಗಲೇ ಸ್ವಾಧೀನಾನುಭವ ಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ 15 ದಿನ ಸಮಯಾವಕಾಶ ನೀಡುತ್ತೇವೆ. 15 ದಿನದಲ್ಲಿ ಅರ್ಜಿಯೊಂದಿಗೆ ಜಿಪಿಎಸ್ ಆಧಾರಿತ ಫೋಟೋ ಅಪ್ ಲೋಡ್ ಮಾಡಬೇಕು. ಅಂಥ ಅರ್ಜಿಯನ್ನು ಪರಿಗಣಿಸಿ ಒಸಿಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಡೀಸೆಲ್ ಬೆಲೆ ತೀವ್ರ ಹೆಚ್ಚಾಗಿದೆ.ಡಿಪೋದ ಬೆಲೆಗೂ, ಖಾಸಗೀಯಾಗಿ ಸಿಗುವ ಡಿಸೆಲ್ ಗೂ ಅಜಗಾಂತರ ವ್ಯತ್ಯಾಸ ಇದ್ದು, ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ . ಅದರ ಬಗ್ಗೆ ವರದಿ ಕೊಡುವಂತೆ ಹೇಳಿದ್ದೇನೆ. ವರದಿ ನೋಡಿಕೊಂಡು ಕೆಸ್ಸಾರ್ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಸಾರಿಗೆ ಇಲಾಖೆಯು ಟಿಕೆಟ್ ದರ ಹೆಚ್ಚಳಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಡಿಪೋಗಳಲ್ಲಿ ಖರೀದಿಸುವ ಡೀಸೆಲ್ ಮತ್ತು ಖಾಸಗಿಯಾಗಿ ಲಭ್ಯವಿರುವ ಡೀಸೆಲ್ ಬೆಲೆಗಳ ನಡುವೆ ಸುಮಾರು 40 ರೂಪಾಯಿಗಳ ದೊಡ್ಡ ವ್ಯತ್ಯಾಸವಿದೆ. ಈ ಬೆಲೆ ವ್ಯತ್ಯಾಸದಿಂದಾಗಿ, ಕೆಲವು ಖಾಸಗಿ ಸಾರಿಗೆ ನಿರ್ವಾಹಕರು ಡಿಪೋದಿಂದ ಡೀಸೆಲ್ ಖರೀದಿಸುವುದನ್ನು ಬಿಟ್ಟು, ಸಾರ್ವಜನಿಕ ಪೆಟ್ರೋಲ್ ಬಂಕ್‌ಗಳಿಂದ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ಕೆಎಸ್‌ಆರ್‌ಟಿಸಿಯನ್ನು ಉಳಿಸಿಕೊಳ್ಳುವ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮತೋಲಿತ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡೀಸೆಲ್ ಬೆಲೆ ಹೆಚ್ಚಾದಾಗ ಸ್ವಯಂಚಾಲಿತವಾಗಿ ಸಾರಿಗೆ ದರ ಹೆಚ್ಚಳ ಮಾಡುವ ತೀರ್ಮಾನವಿತ್ತು. ಪ್ರಧಾನ ಮಂತ್ರಿಗಳು ಸಾರ್ವಜನಿಕ ಸಾರಿಗೆಯನ್ನು ಬಳಸಲು ಮನವಿ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
