Uncategorized

ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದಲ್ಲಿ ಮಹಾರುದ್ರಾಭಿಷೇಕ: ಉತ್ತಮ ಮಳೆ, ರೈತರ ಸಮೃದ್ಧಿಗಾಗಿ ಸಕಲ ಮರಾಠಾ ಸಮಾಜದಿಂದ ವಿಶೇಷ ಪ್ರಾರ್ಥನೆ!

Share

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಳಗಾವಿಯ ಐತಿಹಾಸಿಕ ಕಪಿಲೇಶ್ವರ ಮಂದಿರದಲ್ಲಿ ಸಕಲ ಮರಾಠ ಸಮಾಜದ ವತಿಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಿತು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕಂಗಾಲಾಗಿರುವ ಅನ್ನದಾತನ ಬದುಕು ಹಸನಾಗಲಿ ಹಾಗೂ ಶೀಘ್ರದಲ್ಲೇ ವರುಣ ದೇವ ಕೃಪೆ ತೋರಲಿ ಎಂದು ನೂರಾರು ಶಿವಭಕ್ತರು ಒಟ್ಟಾಗಿ ದೇವರಲ್ಲಿ ಪ್ರಾರ್ಥಿಸಿದರು.

ಬೆಳಗಾವಿ ನಗರದ ಐತಿಹಾಸಿಕ ದೇವಸ್ಥಾನ ದಕ್ಷಿಣ ಕಾಸಿ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಕಲ ಮರಾಠಾ ಸಮಾಜದ ವತಿಯಿಂದ ಲೋಕ ಕಲ್ಯಾಣಾರ್ಥ ಹಾಗೂ ಉತ್ತಮ ಮಳೆಗಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯೇ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಅತ್ಯಂತ ಭಕ್ತಿ-ಭಾವದಿಂದ ‘ಮಹಾರುದ್ರಾಭಿಷೇಕ’ವನ್ನು ನೆರವೇರಿಸಲಾಯಿತು. ಇನ್ನು ಸಾಯಂಕಾಲ ಭಕ್ತರಿಗಾಗಿ ಭಜನಾ ಕಾರ್ಯಕ್ರಮ ಹಾಗೂ ಸಾಂಪ್ರದಾಯಿಕ ಮಹಾ ಆರತಿಯನ್ನು ಆಯೋಜಿಸಲಾಗಿದ್ದು, ಇಡೀ ಶಿವನ ಸನ್ನಿಧಿ ಮಂತ್ರಘೋಷ ಹಾಗೂ ಭಕ್ತಿ ರಸಾಯನದಿಂದ ಮಾರ್ಗೊಳಗಿತು.

ಬೆಳಗಾವಿ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ ಮಳೆಯ ತೀವ್ರ ಅಭಾವ ಎದುರಾಗಿದೆ. ಇದರಿಂದಾಗಿ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಆದಷ್ಟು ಬೇಗ ಜಿಲ್ಲಾದ್ಯಂತ ಸುಖ-ಸಮೃದ್ಧಿಯ ಮಳೆಯಾಗಲಿ, ರೈತರ ಕಷ್ಟಗಳು ದೂರವಾಗಲಿ ಮತ್ತು ಸಮಾಜದ ಪ್ರತಿಯೊಂದು ವರ್ಗದ ಜನರಿಗೂ ಒಳಿತಾಗಲಿ ಎಂದು ಮರಾಠ ಸಮಾಜದ ಮುಖಂಡರು ಹಾಗೂ ನೂರಾರು ಶಿವಭಕ್ತರು ಕಪಿಲೇಶ್ವರನಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಈ ಕುರಿತು ಸಕಲ ಮರಾಠಾ ಸಮಾಜದ ಪ್ರಮುಖರಾದ ಕಿರಣ್ ಜಾಧವ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಈ ವಿಶೇಷ ಧಾರ್ಮಿಕ ಸಂದರ್ಭದಲ್ಲಿ ಸಕಲ ಮರಾಠಾ ಸಮಾಜದ ಪ್ರಮುಖ ನಾಯಕರು, ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Tags:

error: Content is protected !!